ಕೇಂದ್ರ ಸರ್ಕಾರದ ನೀತಿ ವಿರುದ್ಧ ಎಡರಂಗದ ಮಾನವ ಸಂಕೋಲೆ

ಕಾಸರಗೋಡಿನಲ್ಲಿ ನಡೆದ ಮಾನವ ಸಂಕೋಲೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕೇಂದ್ರ ಸರಕಾರ 1000 ಹಾಗೂ 500 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ಉಂಟಾದ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲವೆಂದು ಆರೋಪಿಸಿ ಎಡರಂಗ ಕರೆ ನೀಡಿದ ಮಾನವ ಸಂಕೋಲೆ ಪ್ರತಿಭಟನೆ ಗುರುವಾರ ಸಂಜೆ ಕಾಸರಗೋಡಿನಿಂದ ತಿರುವನಂತಪುರದ ರಾಜಭವನದ ತನಕ ನಡೆಯಿತು. ಮಾನವ ಸಂಕೋಲೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡರು.

ಎಡರಂಗದ ಕಾರ್ಯಕರ್ತರೊಂದಿಗೆ ಸಾಮಾನ್ಯ ಜನತೆ ಹಾಗೂ ಇತರ ಸಂಘಟನೆಗಳವರು ಪ್ರತಿಭಟನೆಯಲ್ಲಿ ಕೈ ಜೋಡಿಸಿರುವುದು ವಿಶೇಷವಾಗಿತ್ತು.

ತಿರುವನಂತಪುರದ ರಾಜಭವನದ ಮುಂಭಾಗದಲ್ಲಿ ಪ್ರತಿಭಟನೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಕೇಂದ್ರ ಸರಕಾರದ ವಿರುದ್ಧ ಕೇರಳದಲ್ಲಿ ನಡೆಸಿದ ಮಾನವ ಸಂಕೋಲೆ ಮೂಲಕ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರಕಾರದ ತಪ್ಪು ಧೋರಣೆ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿದೆ. ಸಾಮಾನ್ಯ ಜನತೆಯ ಜೀವನವನ್ನು ಅಸ್ತವ್ಯಸ್ತ ಮಾಡಿದ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಗಳು ವ್ಯಾಪಕವಾಗುತ್ತಿರುವುದಕ್ಕೆ ಕೇರಳವೇ ಸಾಕ್ಷಿ ಎಂದು ಹೇಳಿದರು.