`ಲೀಡರ್’, `ಮಾಸ್ ಲೀಡರ್’ ಕಲಹ

ಬೆಂಗಳೂರು : ನಿರ್ದೇಶಕ ಎ ಎಂ ಆರ್ ರಮೇಶ್ ಅವರ ಮುಂಬರುವ ಚಿತ್ರ `ಲೀಡರ್’ ಹಾಗೂ ಶಿವರಾಜಕುಮಾರ್ ಅಭಿನಯದ ಮುಂದಿನ ಚಿತ್ರ `ಮಾಸ್ ಲೀಡರ್’ ಶೀರ್ಷಿಕೆಯ ಸಂಬಂಧದ ಜಗಳ ಈಗ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಅಂಗಳ ತಲುಪಿದೆ. ಕೆಲ ಅನಾಮಿಕ ವ್ಯಕ್ತಿಗಳಿಂದ ತನಗೆ ಬೆದರಿಕೆ ಕರೆಗಳು ಬರುತ್ತಿವೆ ಹಾಗೂ ತಮಗೂ ತಮ್ಮ ಕುಟುಂಬ ಸದಸ್ಯರಿಗೂ ರಕ್ಷಣೆ ನೀಡುವಂತೆ ರಮೇಶ್  ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.

2006ರಲ್ಲಿ ತೆರೆ ಕಂಡಿರುವ `ಸಯನೈಡ್’ ಚಿತ್ರದ ಮೂಲಕ ಖ್ಯಾತಿಯ ಶಿಖರವೇರಿದ್ದ ರಮೇಶ್ ಅವರು ಹೇಳುವಂತೆ ಅವರು ತಮ್ಮ ಮುಂಬರುವ ಚಿತ್ರದ ಶೀರ್ಷಿಕೆ `ಲೀಡರ್’ನ್ನು 2013ರಲ್ಲಿಯೇ ರಿಜಿಸ್ಟರ್ ಮಾಡಿದ್ದರು. ಆದರೆ  ಈಗ  ಇನ್ನೊಂದು ನಿರ್ಮಾಣ ಸಂಸ್ಥೆ ಶಿವರಾಜಕುಮಾರ್ ನಾಯಕನಾಗಿ ನಟಿಸಲಿರುವ ಚಿತ್ರಕ್ಕೂ ಅದೇ ಹೆಸರನ್ನು ಇಡಲು ಪಟ್ಟು ಹಿಡಿದಿದ್ದು ಎರಡೂ ಕಡೆಗಳ ದಾಖಲೆಗಳನ್ನು ಪರಿಶೀಲಿಸಿ ಕರ್ನಾಟಕ ಫಿಲ್ಮ್ ಚೇಂಬರ್ ತರುಣ್ ಶಿವಪ್ಪ ನಿರ್ಮಿಸಲಿರುವ ಶಿವರಾಜಕುಮಾರ್ ಅಭಿನಯದ ಚಿತ್ರಕ್ಕೆ `ಮಾಸ್ ಲೀಡರ್’ ಎಂಬ ಹೆಸರನ್ನು ಸೂಚಿಸಿತ್ತು.

ಆದರೆ ರಮೇಶ್ ನಿರ್ದೇಶನದ ಚಿತ್ರಕ್ಕೆ `ಲೀಡರ್’ ಎಂಬ ಹೆಸರಿಡುವುದನ್ನು ವಿರೋಧಿಸಿ ಶಿವರಾಜಕುಮಾರ್ ಅಭಿಮಾನಿಗಳೆಂದು ಹೇಳಿಕೊಂಡಿರುವ ಕೆಲವರು ಅವರಿಗೆ ಬೆದರಿಕೆ ಹಾಕಲಾರಂಭಿಸಿದ್ದು ಈ ಬಗ್ಗೆ ಫಿಲ್ಮ್ ಚೇಂಬರಿಗೆ ದೂರಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ರಮೇಶ್ ಈಗ ಪೊಲೀಸ್ ಆಯುಕ್ತರ ಮೊರೆ ಹೋಗಿದ್ದಾರೆ.