ಮೀನಿನಲ್ಲಿ ಸೀಸದ ಅಂಶ ಪತ್ತೆ

ನಮ್ಮ ಪ್ರತಿನಿಧಿ ವರದಿ

ಅಂಕೋಲಾ : `ದೇವರ ಮೀನು’ ಎಂದು ಗುರುತಿಸಿಕೊಂಡು ಅನಾದಿ ಕಾಲದಿಂದಲೂ ಆಹಾರ ನಿಷಿದ್ಧಕ್ಕೊಳಪಟ್ಟಿರುವ ಮಡ್ಲೆ ಮೀನಿನಲ್ಲಿ ಮಾರಕ ಸೀಸದ ಅಂಶವಿರುವುದು ಇತ್ತೀಚಿನ ಸಂಶೋಧನೆಗಳಿಂದ ದೃಢಪಟ್ಟಿದೆ.

ಇಂಗ್ಲಿಷಿನಲ್ಲಿ ಮ್ಯುಲೆಟ್ ಫಿಶ್ ಎಂತಲೂ, ಕೊಂಕಣಿಯಲ್ಲಿ ಶೆವಟೊ ಎಂದು ಗುರುತಿಸಿಕೊಂಡಿರುವ ಮಡ್ಲೆ ಮೀನು ನೆರೆಯ ಗೋವಾ ರಾಜ್ಯದಲ್ಲಿ ರಾಜ್ಯದ ಮೀನು ಎಂಬ ಪಟ್ಟಗಿಟ್ಟಿಸಿಕೊಂಡಿದೆ. ಮೀನುಗಳಲ್ಲಿ ಮಡ್ಲೆ ಮಾಂಸಭರಿತ ಮೀನಾಗಿದ್ದು, ಮಧ್ಯದ ಒಂದು ಮುಳ್ಳನ್ನು ಹೊರತುಪಡಿಸಿದರೆ ಉಳಿದಂತೆ ಮಾಂಸವೇ ಅಡಗಿರುತ್ತದೆ. ಹೀಗಾಗಿ ಮಡ್ಲೆಮೀನಿಗೆ ಎಲ್ಲಿಲ್ಲದ ಬೇಡಿಕೆ.

ಕರಾವಳಿ ತೀರದ ಈ ಭಾಗದ ಕೆಲವು ಸಮಾಜಗಳು ಸೇರಿದಂತೆ ಅನೇಕ ಕುಟುಂಬಗಳಲ್ಲಿ ಮಡ್ಲೆ ಮೀನು ಸೇವಿಸುವುದು ಇಂದಿಗೂ ವಜ್ರ್ಯ. ಏಕೆಂದರೆ ಇವರ ಪಾಲಿಗೆ ಮಡ್ಲೆ ಮೀನೆಂದರೆ `ದೇವರ ಮೀನು ಅಥವಾ ದೇವರ ಹೆಸರಲ್ಲಿ ತ್ಯಜಿಸಿದ ಮೀನು’. ಹೀಗಾಗಿ ತಲೆತಲಾಂತರದಿಂದ ಇವರು ಇದುವರೆಗೂ ಮಡ್ಲೆ ಮೀನು ಸೇವಿಸಿಲ್ಲ. ಅಲ್ಲದೇ ಹಾಗೇನಾದರೂ ತಿಂದಲ್ಲಿ ದೃಷ್ಟಿಗೆ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾಗುತ್ತಾರೆಂಬ ಭಾವನೆ ಅವರದ್ದು.

ಮಕ್ಕಳು ಬಾಯಿ ಚಪ್ಪರಿಸಿ ತಿನ್ನುತ್ತಿದ್ದ ಮ್ಯಾಗಿ ನ್ಯೂಡಲ್ಸ್ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತಾದ ಬೆನ್ನಲ್ಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನಿಷೇಧಕ್ಕೊಳಪಟ್ಟದ್ದು ಎಲ್ಲರಿಗೂ ತಿಳಿದ ವಿಷಯ. ಹೀಗೆ `ಮ್ಯಾಗಿ’ ನಿಷೇಧಕ್ಕೊಳಗಾಗಲು ಕಾರಣವಾದದ್ದು ಅದರಲ್ಲಿ ಅಡಗಿದ್ದ 2.5 ಪಿಪಿಎಂ ಸೀಸದ ಅಂಶ. ಸೀಸದ ಪ್ರಮಾಣ ಹೆಚ್ಚಿರುವ ಆಹಾರ ಸೇವನೆಯಿಂದ ಮಾನವನ ಆರೋಗ್ಯದ ಮೇಲೆ ಹಲವು ವ್ಯತಿರಿಕ್ತ ಪರಿಣಾಮ ಎದುರಾಗುತ್ತದೆ. ವಿಶೇಷವಾಗಿ ಮೆದುಳು ಮತ್ತು ನರ ಸಂಬಂಧಿ ಕಾಯಿಲೆಗಳು, ರಕ್ತದೊತ್ತಡ ಮತ್ತು ಕಿಡ್ನಿ ಸಮಸ್ಯೆಗಳಿಗೆ ತುತ್ತಾಗುತ್ತಾರೆ.

ಕುತೂಹಲಕರ ವಿಷಯವೆಂದರೆ, ಇತ್ತೀಚಿನ ಕೆಲವು ಸಂಶೋಧನೆಗಳ ಪ್ರಕಾರ ಮಡ್ಲೆ ಮೀನಿನಲ್ಲಿ 3ರಿಂದ 16 ಪಿಪಿಎಂ ಸೀಸದ ಪ್ರಮಾಣವಿರುವುದು ಕಂಡುಬಂದಿದೆ. ಸೀಸದ ಪ್ರಮಾಣ ಹೆಚ್ಚಿರುವ ಕಾರಣಕ್ಕೆ ಮಡ್ಲೆಮೀನು ಬಹುಬೇಗ ಕೆಡುತ್ತದೆ ಎಂದೂ ತಿಳಿದುಬಂದಿದೆ. ಮಡ್ಲೆ ಮೀನಿನಲ್ಲಿ ಅಡಗಿರುವ ಹಾನಿಕಾರಕ ಅಂಶಗಳನ್ನು ಅರಿತ ಪೂರ್ವಜರು ಈ ಮೀನು ಸೇವನೆಗೆ ನಿಷೇಧ ಹೇರಿರಬಹುದಾದ ಸಾಧ್ಯತೆ ಅಲ್ಲಗಳೆಯುವಂತಿಲ್ಲ.