ಗಿನ್ನೆಸ್ ಪುಸ್ತಕದಲ್ಲಿ ಹೆಸರು ದಾಖಲಿಸುವ ಯತ್ನದಲ್ಲಿ ಲೆಡ್ ಕಲಾವಿದ ಸಂಜಯ್

ನಮ್ಮ ಪ್ರತಿನಿಧಿ ವರದಿ

ಉಡುಪಿ : ಕಲೆಯ ಸೊಬಗೇ ಅಂಥಾದ್ದು. ಕಸದಿಂದ ರಸ ತೆಗೆಯುವ ಮಂದಿ ಹಲವರಾದರೆ ಇನ್ನು ಹಲವು ಬಗೆಗಳಲ್ಲಿ ಕಲೆಯನ್ನು ಅರಳಿಸುವವರು ಇದ್ದಾರೆ. ಇಂತಹ ಸಾಧಕರಲ್ಲಿ ಒಬ್ಬರು ಉಡುಪಿ ಕೊಕ್ಕರ್ಣೆಯ ಸಂಜಯ್ ದಯಾನಂದ್. ಇದೀಗ ಇವರು ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆಸುವ ಯತ್ನ ಮಾಡುತ್ತಿದ್ದಾರೆ. ಈಗಾಗಲೇ ಇಂಡಿಯನ್ ಮತ್ತು ಏಷಿಯನ್ ಬುಕ್ ಆಫ್ ರೆಕಾಡ್ರ್ಸಿಗೆ ಅರ್ಹತೆ ಪಡೆದಿದ್ದಾರೆ.

ಸಂಜಯ್ ಪೆನ್ಸಿಲ್ ಲೆಡ್ಡಿನಲ್ಲಿ ಗಣೇಶ ಮೂರ್ತಿ ಕೆತ್ತುವ ಸೂಕ್ಷ್ಮ ಕಲೆಯನ್ನು ಕರಗತ ಮಾಡಿಕೊಂಡಿದ್ದು, ಸಾಮಾನ್ಯ ಪೆನ್ಸಿಲಿನ 0.1 ಮಿ ಮೀ ಗಾತ್ರದ ಲೆಡ್ಡಿನಲ್ಲಿ ಒಂದೂವರೆ ನಿಮಿಷದಲ್ಲಿ ಮೂರು ವಿವಿಧ ಭಂಗಿಯ ಗಣಪತಿಯ ಮೂರ್ತಿ ರಚಿಸಿದ್ದಾರೆ.

ಆಗಸ್ಟ್ ಮೊದಲ ವಾರದಲ್ಲಿ ಹರಿಯಾಣದ ಫರೀದಾಬಾದಿನಲ್ಲಿ ಅರ್ಹತಾ ಸುತ್ತಿನ ದಾಖಲಾತಿ ಪ್ರಕ್ರಿಯೆ ನಡೆದಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಪ್ರಮಾಣಪತ್ರ ಕೈ ಸೇರುತ್ತಿದೆ. ನಂತರ ಗಿನ್ನಿಸ್ ಬುಕ್ ಆಫ್ ರೆಕಾಡ್ರ್ಸ್ ದಾಖಲಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

2010ರಲ್ಲಿ ರಚಿಸಿದ್ದ 2 ಮಿ ಮೀ ಎತ್ತರ, 1.5 ಮಿ ಮೀ ಅಗಲದ ನ್ಯಾನೋ ಗಣೇಶನ ಮೂರ್ತಿ ಗಿನ್ನಿಸ್ ಬುಕ್ ಆಫ್ ರೆಕಾರ್ಡಿಗೆ ಅರ್ಹತೆ ಪಡೆದಿತ್ತು. 2012ರಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಡೆಸಿದ್ದ ಸ್ಪರ್ಧೆಯಲ್ಲಿ ಪೆನ್ಸಿಲ್ ಲೆಡ್ಡಿನಲ್ಲಿ 2 ನಿಮಿಷ 47 ಸೆಕೆಂಡಿನಲ್ಲಿ ರಚಿಸಿದ ಗಣೇಶ ಮೂರ್ತಿ ಡಿಫರೆಂಟ್ ಕರ್ವಿಂಗ್ ಆಫ್ ಗಣೇಶ ಐಡಲ್ ಎಂದು ಹೆಸರು ಪಡೆದು 2013ರ ಆವೃತ್ತಿಯಲ್ಲಿ ಸ್ಥಾನ ಪಡೆದಿತ್ತು.

ಗಿನ್ನಿಸ್ ಬುಕ್ ಆಫ್ ರೆಕಾರ್ಡ್, ಇಂಡಿಯನ್ ಮತ್ತು ಏಷಿಯನ್ ಬುಕ್ ಆಫ್ ರೆಕಾರ್ಡಿಗೆ ಅರ್ಹತಾ ಪ್ರಕ್ರಿಯೆಗಳು ಉತ್ತರ ಭಾರತದಲ್ಲಿ ನಡೆಯುತ್ತಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಂಜಯಗೆ ಅಲ್ಲಿಗೆ ತೆರಳಲು ಕಷ್ಟವಾಗುತ್ತಿದೆ. ಹೀಗಾಗಿ `ವಿಕ್ಟರಿ ಬಾಯ್ಸ್’ ಎಂಬ ಗೆಳೆಯರ ಬಳಗ ಇವರಿಗೆ ನೆರವಾಗಿದೆ.