ಮನೆಗೆಲಸದಾಕೆಯ ಮೇಲೆ ಅತ್ಯಾಚಾರಗೈದ ವಕೀಲರು

ಸಾಂದರ್ಭಿಕ ಚಿತ್ರ

ಸಂತ್ರಸ್ತೆಯಿಂದ ವೀಡಿಯೊ ಪುರಾವೆ

 ಥಾಣೆ : ಮನೆಗೆಲಸದಾಕೆಯ ಮೇಲೆ ಮೂರು ತಿಂಗಳುಗಳ ಕಾಲ ಅತ್ಯಾಚಾರಗೈದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಥಾಣೆ ಪೊಲೀಸರು ವಕೀಲನೊಬ್ಬನ್ನು ಬಂಧಿಸಿದ್ದು  ಆತನ ತಾಯಿ, ಸಹೋದರ, ಸಹೋದರಿ, ಭಾವ ಹಾಗೂ ಕುಟುಂಬ ಸ್ನೇಹಿತನೊಬ್ಬನ ವಿರುದ್ಧ  ಪ್ರಕರಣ ದಾಖಲಿಸಲಾಗಿದೆ. ಬಂಧಿತ ವಕೀಲ ಗಣೇಶ್ ಮೋರೆಯನ್ನು ಡಿಸೆಂಬರ್ 31ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ಸಂತ್ರಸ್ತೆ ಮಹಿಳೆಗೆ 45 ವರ್ಷ ವಯಸ್ಸಾಗಿದ್ದು ಆಕೆ ತನ್ನ ಆರೋಪಕ್ಕೆ ಪುರಾವೆಯಾಗಿ ವೀಡಿಯೊವೊಂದನ್ನೂ ಪೊಲೀಸರಿಗೆ ಒದಗಿಸಿದ್ದಾಳೆ.

ಉತ್ತರ ಮಹಾರಾಷ್ಟ್ರದ ಮಹಿಳೆಯ ಸಹೋದರ ಥಾಣೆಯಲ್ಲಿದ್ದು ಆತನಿಗೆ ಕಿಡ್ನಿ ಸಮಸ್ಯೆಯಿರುವುದರಿಂದ ಆಗಾಗ ಆಸ್ಪತ್ರೆಗೆ ಭೇಟಿ ನೀಡಬೇಕಾಗಿದ್ದ ಹಿನ್ನೆಲೆಯಲ್ಲಿ ಆತನಿಗೆ ಸಹಾಯ ಮಾಡಲೆಂದು ಆಕೆ ನಗರಕ್ಕೆ ಬಂದಿದ್ದಳು. ಈ ಸಂದರ್ಭ ಆಕೆ ವಕೀಲನ ಉಲ್ಲಾಸನಗರ ನಿವಾಸದಲ್ಲಿ ಮನೆಗೆಲಸಕ್ಕೆ ಸೇರಿದ್ದಳು.

ದೂರುದಾರೆಯ ಪ್ರಕಾರ ಆಕೆ ಸೆಪ್ಟೆಂಬರ್ 19ರಂದು ಮನೆಯಲ್ಲಿದ್ದ ಮಹಿಳೆಯೊಬ್ಬಳು ಅಸಭ್ಯವಾಗಿ ವರ್ತಿಸುವುದನ್ನು ನೋಡಿ ಗಣೇಶ್ ತಾಯಿಯಾದ ಅಲ್ಕಾ ಮೋರೆಗೆ ಈ ಬಗ್ಗೆ ತಿಳಿಸಿದಾಗ ಆಕೆ ಸಿಟ್ಟುಗೊಂಡು “ಸಂಬಳ ನೀಡುವ ಮನೆಯ ಗೌರವವನ್ನು ಹಾಳು ಮಾಡುತ್ತಿದ್ದೀಯಾ” ಎಂದು ಗದರಿಸಿದ್ದಳು. ನಂತರ ಆಕೆ ತನ್ನ ಪುತ್ರಿ ಸಂಗೀತಾ, ಅಳಿಯ ದೀಪಕ್ ಶಾ ಹಾಗೂ ಕುಟುಂಬದ ಸ್ನೇಹಿತ ನಿಕುಂಜ್ ರಾವಲ್ ಅವರನ್ನು ಕರೆದು ದೂರಿದ್ದಳು. “ಕೋಪಗೊಂಡ ಮಹಿಳೆಯರು ತನ್ನನ್ನು ಮಲಗುವ ಕೋಣೆಗೆ ದೂಡಿದರು ಹಾಗೂ ಇಬ್ಬರು ಪುರುಷ ವಕೀಲರು ನನ್ನ ಮೇಲೆ ಆತ್ಯಾಚಾರಗೈದರು” ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ನಂತರ ತಾನು ಕೆಲಸಕ್ಕೆ ಬರುವುದನ್ನು ನಿಲ್ಲಿಸಿದರೂ ಉಲ್ಲಾಸ್ ಹಾಗೂ ಗಣೇಶ್ ಮೋರೆ ತನ್ನ ಮನೆಗೆ ಬಂದು ತನ್ನನ್ನು ಬೆದರಿಸಿ ಲೈಂಗಿಕ ದೌರ್ಜನ್ಯವೆಸಗುತ್ತಿದ್ದರು ಹಾಗೂ  ಅವರ ಕುಟುಂಬದಲ್ಲಿ ಎಲ್ಲರೂ ವಕೀಲರಾಗಿರುವುದರಿಂದ  ನನಗೇನೂ ಮಾಡಲು ಸಾಧ್ಯವಾಗದು ಎಂದು ಹೇಳಿದ್ದರು ಎಂದು ಸಂತ್ರಸ್ತೆ ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

ಆಕೆ ತನ್ನ ಕುಟುಂಬಕ್ಕೆ ಈ ಬಗ್ಗೆ ತಿಳಿಸಿದ ನಂತರ ಮನೆಯಲ್ಲಿ ಗುಪ್ತ ಕ್ಯಾಮರಾ ಅಳವಡಿಸಲಾಗಿದ್ದು ಅದರಲ್ಲಿ ಈ ತಿಂಗಳು ಗಣೇಶ್ ಚೂರಿಯೊಂದಿಗೆ ಮನೆಗೆ ಬಂದ ದೃಶ್ಯಗಳು ದಾಖಲಾಗಿವೆಯೆಂದು ಸಂತ್ರಸ್ತೆ ಹೇಳಿ ವೀಡಿಯೊವನ್ನು ಪೊಲೀಸರಿಗೆ ನೀಡಿದ್ದಳು. ಆದರೆ ದಾಖಲಾದ ದೃಶ್ಯಾವಳಿಯಲ್ಲಿ ಗಣೇಶ್ ಮನೆ ಪ್ರವೇಶಿಸುವಾಗ ಆತನ ಕೈಯ್ಯಲ್ಲಿ ಚೂರಿ ಕಾಣಿಸಿಲ್ಲ ಎಂದು ಪೊಲೀಸರು ಹೇಳಿದ್ದು ಆರೋಪದ ಸತ್ಯಾಸತ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.