ಲಾಕಪ್ಪಿನಲ್ಲಿ ಕೈದಿ ಸತ್ತರೆ ಪೊಲೀಸರಿಗೆ ಮರಣದಂಡನೆ : ಆಯೋಗ ಸಲಹೆ

ಕಸ್ಟಡಿಯಲ್ಲಿರುವಾಗ ಯಾರಿಗಾದರೂ ತೊಂದರೆಯಾದರೆ ಇದು ಹಿಂಸೆಯಿಂದ ಉಂಟಾಗಿದ್ದಲ್ಲ ಎಂದು ಸಾಬೀತು ಪಡಿಸುವ ಜವಾಬ್ದಾರಿ ಸರಕಾರದ್ದಾಗಿರಬೇಕು ಎಂದು ಕಾನೂನು ಆಯೋಗ ಹೇಳುತ್ತದೆ. 

  • ಶ್ರುತಿ ಸಾಗರ್ ಯಮುನನ್

ದೇಶದ ಸಂವಿಧಾನ “ಹಿಂಸೆ” ಎಂಬ ಪದದ ವಿವರಣೆ ನೀಡಿಲ್ಲವಾದರೂ 21ನೇ ವಿಧಿಯಲ್ಲಿ ಖಾತರಿಪಡಿಸಲಾಗಿರುವ ಘನತೆಯಿಂದ ಜೀವಿಸುವ ಹಕ್ಕು ಹಿಂಸೆಯ ವಿರುದ್ಧ ರಕ್ಷಣೆ ನೀಡುತ್ತದೆ ಎಂದು ಸುಪ್ರೀಂ ಕೋರ್ಟ್ 1997ರಲ್ಲಿ ನೀಡಿದ ತನ್ನ ತೀರ್ಪಿನಲ್ಲಿ ಹೇಳಿತ್ತು. ತನ್ನ ಗಮನಕ್ಕೆ ತರಲಾದ ಪ್ರತಿಯೊಂದು ಹಿಂಸೆಯ ಪ್ರಕರಣವನ್ನೂ ನ್ಯಾಯಾಂಗ ಗಂಭೀರವಾಗಿ ಪರಿಗಣಿಸಿದೆ, ಅದರೆ ಇದೇ ಮಾತನ್ನು ಕಾರ್ಯಾಂಗ ಮತ್ತು ಶಾಸಕಾಂಗದ ವಿಚಾರದಲ್ಲಿ ಹೇಳುವ ಹಾಗಿಲ್ಲ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿರುವ ಭಾರತದ ಕಾನೂನು ಆಯೋಗದ 273ನೇ ವರದಿಯು ಹಿಂಸೆಯನ್ನು ನಿಭಾಯಿಸುವಲ್ಲಿ ಕೇಂದ್ರ ಸರಕಾರದ ನಿರ್ಲಕ್ಷ್ಯ ಮತ್ತು ವೈಫಲ್ಯವನ್ನು ದೂರಿದೆ.

ಎಲ್ಲಾ ವಿಧದ ಹಿಂಸೆಗಳನ್ನು ನಿಷೇಧಿಸುವ ಹಲವು ಅಂತಾರಾಷ್ಟ್ರೀಯ ಒಡಂಬಡಿಕೆಗಳಿಗೆ ಭಾರತ ಸಹಿ ಹಾಕಿದೆಯಾದರೂ ಈ ಹಿಂಸೆಯನ್ನು ಹಿತ್ತಿಕ್ಕಲು ಕಾನೂನೊಂದನ್ನು ಜಾರಿಗೊಳಿಸಲು ವಿಫಲವಾಗಿದೆ. ವಾಸ್ತವದಲ್ಲಿ ಸರಕಾರಿ ಏಜನ್ಸಿಗಳು, ಪೊಲೀಸರು ಹಾಗೂ ಸೇನಾ ಪಡೆಗಳೇ ಹಲವಾರು ಬಾರಿ ಹಿಂಸೆಗೆ ಕಾರಣರಾಗಿರುವುದೂ ಉಂಟು. ಹಿಂಸೆಯ ಬಗೆಗಿನ ವರದಿಯನ್ನು ತುರ್ತಾಗಿ ಹೊರತರಬೇಕೆಂದು 2014ರಲ್ಲಿ ಸುಪ್ರೀಂ ಕೋರ್ಟ್ ಹೇಳಿದ ನಂತರ ಕೇಂದ್ರ ಸರಕಾರ ಕಾನೂನು ಆಯೋಗಕ್ಕೆ ಪತ್ರ ಬರೆದಿರುವುದೇ ಈಗ ವರದಿ ಹೊರಬರಲು ಕಾರಣವಾಗಿದೆ.

ಸೇನಾ ಪಡೆಗಳ ವಿಶೇಷಾಧಿಕಾರ ಕಾಯಿದೆಯ ಬಗ್ಗೆ ವರದಿ ಏನನ್ನೂ ಹೇಳದೇ ಇದ್ದರೂ ಹಿಂಸೆಯ ಅಪರಾಧವನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಒಂದು ಕರಡು ಮಸೂದೆಯನ್ನು ಆಯೋಗ ಸರಕಾರಕ್ಕೆ ನೀಡಿದೆ. ಉದಾಹರಣೆಗೆ “ಸಾರ್ವಭೌಮ ವಿನಾಯಿತಿ” (ಸಾವರಿನ್ ಇಮ್ಮ್ಯೂನಿಟಿ) ಎಂಬ ಪರಿಕಲ್ಪನೆಯನ್ನು ದುರ್ಬಲಗೊಳಿಸುವ ಸಲಹೆಯನ್ನೂ ಅದು ನೀಡಿದ್ದು ಇದು ಜಾರಿಯಾಗಿದ್ದೇ ಆದಲ್ಲಿ ಕಠಿಣ ಯಾ ಬರ್ಬರವೆಂದು ತಿಳಿಯಲಾದ ಕೆಲವೊಂದು ವಿಶೇಷ ಕಾಯಿದೆಗಳನ್ನು ದುರ್ಬಲಗೊಳಿಸಬಹುದು.

“ಸಾವರಿನ್ ಇಮ್ಮ್ಯೂನಿಟಿ ವಿಚಾರ ಬಂದಾಗ ಮೂಲಭೂತ ಹಕ್ಕುಗಳನ್ನು ಹೊಂದಿದವರು ಜನರೇ ಹೊರತು ಸರಕಾರದ ಏಜಂಟರುಗಳಲ್ಲ ಎಂಬ ಅಂಶ ನ್ಯಾಯಾಲಯಗಳಿಗೆ ನೆನಪಿರಬೇಕು” ಎಂದು ವರದಿ ಹೇಳಿದೆ.

ಪೊಲೀಸ್ ಕಸ್ಟಡಿಗಳಲ್ಲಿ ನಡೆಯುವ ಹಿಂಸೆಯ ವಿರುದ್ಧವೂ ಕಠಿಣ ಕ್ರಮಗಳಿಗೆ ಆಯೋಗ ಶಿಫಾರಸು ಮಾಡಿದೆ. ಕಸ್ಟಡಿಯಲ್ಲಿರುವಾಗ ಯಾರಿಗಾದರೂ ತೊಂದರೆಯಾದರೆ ಇದು ಹಿಂಸೆಯಿಂದ ಉಂಟಾಗಿದ್ದಲ್ಲ ಎಂದು ಸಾಬೀತು ಪಡಿಸುವ ಜವಾಬ್ದಾರಿ ಸರಕಾರದ್ದಾಗಿರಬೇಕು, ಯಾರಾದರೂ ಹಿಂಸೆಯಿಂದಾಗಿ ಸತ್ತರೆ ಅದಕ್ಕೆ ಕಾರಣರಾದವರಿಗೆ ಮರಣದಂಡನೆ ವಿಧಿಸಬೇಕೆಂದೂ ಹೇಳಿದೆ.

ಹಿಂಸಾ ಪ್ರಕರಣದಲ್ಲಿನ ಸಂತ್ರಸ್ತರಿಗೆ ಪರಿಹಾರ ಪಡೆಯುವುದನ್ನು ಸುಲಭವಾಗಿಸಲು ಹಲವು ಕ್ರಿಮಿನಲ್ ಕಾನೂನುಗಳಿಗೆ ಸೂಕ್ತ ಮಾರ್ಪಾಟುಗಳನ್ನೂ ಶಿಫಾರಸು ಮಾಡಲಾಗಿದೆ.