ಬ್ಯಾಡ್ಮಿಂಟನ್ ಏಷ್ಯನ್ ಚಾಂಪಿಯನ್ಶಿಪ್ಪಿನಲ್ಲಿ ಅನುಪಮ ಸಾಧನೆಗೈದ ಅಝಂಘರ್ ಡೀಸಿ ಕನ್ನಡಿಗ ಸುಹಾಸ್

ಉತ್ತರ ಪ್ರದೇಶ ಸೀಎಂ ಅಖಿಲೇಶ್ ಯಾದವರಿಂದ `ಯಶ್ ಭಾರತಿ' ಪ್ರಶಸ್ತಿ ಸ್ವೀಕರಿಸುತ್ತಿರುವ ಸುಹಾಸ್

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಲೋಕಸಭಾ ಕ್ಷೇತ್ರವಾಗಿರುವ ಆಝಂಘರ್ ಒಂದು ಪ್ರತಿಷ್ಠಿತ ಹಾಗೂ ರಾಜಕೀಯ ಸೂಕ್ಷ್ಮ ಜಿಲ್ಲೆ. ಇಂತಹ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಆಗಿ ಸೇವೆ ಸಲ್ಲಿಸುವುದು ಅಷ್ಟೊಂದು ಸುಲಭದ ಕಾರ್ಯವಲ್ಲ. ತಮ್ಮ ಕಾರ್ಯದೊತ್ತಡಗಳ ನಡುವೆಯೂ ಬ್ಯಾಡ್ಮಿಂಟನ್ ಆಟವನ್ನು ಛಲದಿಂದ ಕಲಿತು ಈಗ ಪ್ರತಿಷ್ಠಿತ ಪ್ರಶಸ್ತಿಯೊಂದನ್ನೂ ಬಾಚಿಕೊಂಡಿರುವ ಕನ್ನಡಿಗ ಸುಹಾಸ್ ಅವರ ಸಾಧನೆ ಅನುಪಮ.

ಲಖನೌ : ಉತ್ತರ ಪ್ರದೇಶದ ಆಝಂಘರ್ ಜಿಲ್ಲೆ ಹಲವು ಬಾರಿ ತಪ್ಪು ಕಾರಣಗಳಿಗಾಗಿ ಸುದ್ದಿಯಾಗಿದೆ. ಭೂಗತ ಪಾತಕಿ ಅಬು ಸಲೇಂ ಜತೆ ಅದಕ್ಕಿರುವ ಸಂಬಂಧಕ್ಕಾಗಿ, ಬಾಟ್ಲಾ ಹೌಸ್ ಎನ್ಕೌಂಟರ್ ಆರೋಪಿಗಳು ಇಲ್ಲಿನ ಸರ್ಜಾಪುರಕ್ಕೆ ಸೇರಿದವರೆಂಬುದಕ್ಕಾಗಿ ಹಾಗೂ ಇನ್ನೂ ಹಲವು ವಿಚಾರಗಳು ಈ ಜಿಲ್ಲೆಗೆ ಕಪ್ಪು ಚುಕ್ಕೆ ತಂದಿವೆ.

ಆದರೆ ಇತ್ತೀಚೆಗೆ ಈ ಜಿಲ್ಲೆ ಒಂದು ವಿಚಾರಕ್ಕಂತೂ ಸಂತಸಪಟ್ಟಿದೆ. ದೂರದ ಕರ್ನಾಟಕದ ಶಿವಮೊಗ್ಗದವರಾದ ತಮ್ಮ ಜಿಲ್ಲಾಧಿಕಾರಿ ಅವರು ಏಷ್ಯನ್ ಪ್ಯಾರಾ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಜೇತರೆಂಬ ಸುದ್ದಿ ಸಿಕ್ಕಾಗ ಇಲ್ಲಿನ ಜನರ ಸಂತಸಕ್ಕೆ ಪಾರವೇ ಇಲ್ಲವಾಗಿದೆ. ಈ ಅಧಿಕಾರಿಯೇ ಸುಹಾಸ್ ಎಲ್ ವೈ.

2007ನೇ ಬ್ಯಾಚಿನ ಐ ಎ ಎಸ್ ಅಧಿಕಾರಿಯಾಗಿರುವ ಇವರ ಸಾಧನೆಗಾಗಿ ಅವರಿಗೆ ಉತ್ತರ ಪ್ರದೇಶ ಸರಕಾರ ತನ್ನ ಅತ್ಯುನ್ನತ ಗೌರವವಾದ `ಯಶ್ ಭಾರತಿ’ ನೀಡಿ ಗೌರವಿಸಿದೆ. ನವೆಂಬರ್ 22ರಿಂದ 27ರತನಕ ನಡೆದ ಏಷ್ಯನ್ ಪ್ಯಾರಾ ಚಾಂಪಿಯನ್ಶಿಪ್ಪಿನಲ್ಲಿ ಅವರು ಚಿನ್ನದ ಪದಕ ಪಡೆದಿದ್ದಾರೆ. ಅಂತಿಮ ಹಣಾಹಣಿಯಲ್ಲಿ ಅವರು ಇಂಡೋನೇಷ್ಯಾದ ಹರೇ ಸುಹಂತೋರನ್ನು ಸೋಲಿಸಿದ್ದರು.

ಬುಧವಾರ ಅವರು ಆಝಂಘರಗೆ ಬಂದಾಗ ಅವರಿಗೆ ಭವ್ಯ ಸ್ವಾಗತ ಕಾದಿತ್ತು. ಜನತೆ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಚಾಂಪಿಯನ್ ಜಿಲ್ಲಾಧಿಕಾರಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಹುಟ್ಟಿನಿಂದಲೇ ಅಂಗ ಊನತೆಯಿಂದ ಬಳಲುತ್ತಿರುವ ಸುಹಾಸ್ ಅವರ ಬಲಗಾಲು ಎಡಗಾಲಿಗಿಂತ ಗಿಡ್ಡವಾಗಿದ್ದು, ಪಂದ್ಯ ಗೆಲ್ಲಲು ಯಾವುದೇ ರ್ಯಾಂಕಿಂಗ್ ಇಲ್ಲದ ತಾನು ಪಟ್ಟ ಶ್ರಮವನ್ನು ಅವರು ವಿವರಿಸಿದ್ದಾರೆ.

ಪಂದ್ಯ ಗೆದ್ದು ಸ್ವದೇಶಕ್ಕೆ ಮರಳಿದ ಕೂಡಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೆಶ್ ಯಾದವ್ ಅವರನ್ನು ಕಂಡು ಮಾತನಾಡಿದ್ದರು ಸುಹಾಸ್. ಅವರ ಸಾಧನೆಯಿಂದ ಸಂತಸಗೊಂಡ ಮುಖ್ಯಮಂತ್ರಿ ಅಖಿಲೇಶ್ ಅದೇ ದಿನ ಸಂಜೆ ಅವರಿಗೆ ರಾಜ್ಯದ ಅತ್ಯುನ್ನತ ಗೌರವವಾದ `ಯಶ್ ಭಾರತಿ’ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿದ್ದರು.

ಸುಹಾಸ್ ಅವರ ಮುಂದಿನ ಗುರಿ ದಕ್ಷಿಣ ಕೊರಿಯಾದಲ್ಲಿ 2017ರಲ್ಲಿ ನಡೆಯಲಿರುವ ವಿಶ್ವ ಪ್ಯಾರಾ-ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್. ಇದರ ನಂತರ ಅವರು 2020ರಲ್ಲಿ ಟೋಕಿಯೋ ಪ್ಯಾರಾ ಒಲಿಂಪಿಕ್ಸಿನಲ್ಲಿ ಭಾಗವಹಿಸುವ ಉದ್ದೇಶ ಹೊಂದಿದ್ದಾರೆ.

ಅಂದ ಹಾಗೆ, ಸುಹಾಸ್ ಅವರ ಬ್ಯಾಡ್ಮಿಂಟನ್ ಸಾಧನೆ ಬಗ್ಗೆ ಜಗತ್ತೇ ಅರಿಯಲು ಕಾರಣ ಅವರ ಪತ್ನಿ ರಿತು ಸುಹಾಸ್. ತಮ್ಮ ಪತಿ ಪಂದ್ಯ ಗೆಲ್ಲುತ್ತಿದ್ದಂತೆಯೇ ಬೀಜಿಂಗಿನಲ್ಲಿ ಪದಕ ಪಡೆಯುವ ಫೋಟೋಗಳನ್ನು ರಿತು ಸಾಮಾಜಿಕ ಜಾಲತಾಣಗಳಲ್ಲ್ಲಿ ಅಪ್ಲೋಡ್ ಮಾಡಿದ್ದರು. “ಕಠಿಣ ಶ್ರಮ ಫಲ ನೀಡಿದೆ. ಅಂತಾರಾಷ್ಟ್ರೀಯ ಪಂದ್ಯವೊಂದನ್ನು ಗೆಲ್ಲಬೇಕೆಂಬ ಅವರ ಕನಸು ಈಡೇರಿದೆ” ಎಂದು ರಿತು ಹೇಳಿದ್ದರು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಲೋಕಸಭಾ ಕ್ಷೇತ್ರವಾಗಿರುವ ಆಝಂಘರ್ ಒಂದು ಪ್ರತಿಷ್ಠಿತ ಹಾಗೂ ರಾಜಕೀಯ ಸೂಕ್ಷ್ಮ ಜಿಲ್ಲೆ. ಇಂತಹ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಆಗಿ ಸೇವೆ ಸಲ್ಲಿಸುವುದು ಅಷ್ಟೊಂದು ಸುಲಭದ ಕಾರ್ಯವಲ್ಲ. ತಮ್ಮ ಕಾರ್ಯದೊತ್ತಡಗಳ ನಡುವೆಯೂ ಬ್ಯಾಡ್ಮಿಂಟನ್ ಆಟವನ್ನು ಛಲದಿಂದ ಕಲಿತು ಈಗ ಪ್ರತಿಷ್ಠಿತ ಪ್ರಶಸ್ತಿಯೊಂದನ್ನೂ ಬಾಚಿಕೊಂಡಿರುವ ಕನ್ನಡಿಗ ಸುಹಾಸ್ ಅವರ ಸಾಧನೆ ಅನುಪಮ.