ಮಣ್ಣು ಜರಿದು ಕಾರ್ಮಿಕ ಸಾವು

ನಮ್ಮ ಪ್ರತಿನಿಧಿ ವರದಿ
ಉಡುಪಿ : ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-66ರ ಕರಾವಳಿ ಬೈಪಾಸ್ ಬಳಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಕಾರ್ಮಿಕನೊಬ್ಬರ ಮೇಲೆ ಮಣ್ಣು ಜರಿದು ಕಾರ್ಮಿಕ ಸಾವನ್ನಪ್ಪಿದ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಕಾಮಗಾರಿ ವೇಳೆ ನಿರ್ಲಕ್ಷ್ಯವಹಿಸಿ ಕಾರ್ಮಿಕನ ಸಾವಿಗೆ ಕಾರಣನಾದ ಗುತ್ತಿಗೆದಾರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಬಿಹಾರ ರಾಜ್ಯ ಮೂಲದ ಬೀರ್ ಬಹುದ್ದೂರ್ (35) ಸಾವನ್ನಪ್ಪಿದ ದುರ್ವೈವಿ. ಕರಾವಳಿ ಬೈಪಾಸ್ ಬಳಿಯ ಬನ್ನಂಜೆ ರಸ್ತೆ ಕಡೆಗೆ ಹೋಗುವ ತಿರುವಿನಲ್ಲಿ ಕಳೆದ ಕೆಲ ದಿನಗಳಿಂದ ಉಡುಪಿ ನಗರಸಭೆಯಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಕಾರ್ಮಿಕರು ಶುಕ್ರವಾರ ಮಧ್ಯಾಹ್ನ ಒಳಚರಂಡಿ ಕಾಮಗಾರಿ ಮಾಡುತ್ತಿದ್ದ ವೇಳೆ ಒಳಚರಂಡಿ ಗುಂಡಿಯೊಳಗೆ ಕೆಲಸ ಮಾಡುತ್ತಿದ್ದ ಬೀರ್ ಬಹುದ್ದೂರ್ ಮೇಲೆ ಮೇಲಿನಿಂದ ಮಣ್ಣು ಜರಿದು ಬಿದ್ದಿದೆ. ಪರಿಣಾಮ ಮಣ್ಣಿನೊಳಗೆ ಸಿಲುಕಿಕೊಂಡ ಬೀರ್ ಬಹುದ್ದೂರನನ್ನು ಇತರ ಕಾರ್ಮಿಕರು ಮಣ್ಣಿನಿಂದ ಹೊರತೆಗೆದಿದ್ದು, ಅದಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಮಣ್ಣಿನಿಂದ ಮೇಲೆತ್ತಿದ್ದ ಶವವನ್ನು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಒಳಚರಂಡಿ ಕಾಮಗಾರಿ ವೇಳೆ ನಿರ್ಲಕ್ಷ್ಯವಹಿಸಿ ಕಾರ್ಮಿಕನ ಸಾವಿಗೆ ಕಾರಣನಾದ ಆರೋಪಿ ಗುತ್ತಿಗೆದಾರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.