ನ್ಯಾಯದ ನಿರೀಕ್ಷೆಯೊಂದಿಗೆ ನಗರದ ಭೂರಹಿತರ ಆಂದೋಲನಕ್ಕೆ ಸಿದ್ದತೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮನೆರಹಿತ ಜನರ ಆಯ್ಕೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಭೂರಹಿತ ಜನರ ಹೋರಾಟ ಸಮಿತಿ ಮಂಗಳೂರು ಘಟಕವು ಮಂಗಳೂರು ನಗರ ಪಾಲಿಕೆಯ ಎದುರುಗಡೆ ಎಪ್ರಿಲ್ 24 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದೆ.

ಮಂಗಳೂರು ಮಹಾನಗರಪಾಲಿಕೆಯು ಸುಮಾರು 2000 ಕುಟುಂಬವನ್ನು ಮನೆರಹಿತರು ಎಂದು ಆರಿಸಿದ್ದು, ಅವರಿಗೆ ಮನೆ ಸೈಟ್ ನೀಡಲು ನಿರ್ಧರಿಸಿದೆ. ಸಮರ್ಪಕ ಆದಾಯ ಮೂಲಗಳನ್ನು ಹೊಂದಿರುವ ಸುಮಾರು 300 ಕುಟುಂಬಗಳು ಈಗಾಗಲೇ ಮನೆಯನ್ನು ಹೊಂದಿವೆ, ಅಂತಹ ಕುಟುಂಬಗಳ ಅರ್ಜಿಗಳನ್ನು ಮನಪಾ ಪರಿಗಣಿಸಬಾರದು ಎಂದು ಘಟಕದ ಕಮಿಟಿ ಜನರಲ್ ಸೆಕ್ರೆಟರಿ ಸಂತೋಷ್ ಶಕ್ತಿನಗರ್ ಹೇಳಿದ್ದಾರೆ.

ಘಟಕವು ಬೇಡಿಕೆಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು ಅವುಗಳು ಈ ರೀತಿ ಇವೆ : “ಮನಪಾವು ಸುರತ್ಕಲ್‍ನ ಇಡ್ಯಾದ ಅವಶ್ಯಕ ಜನರಿಗೆ ಮನೆ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ನಿರ್ಧಿಷ್ಟ ದಿನಾಂಕವನ್ನು ತಿಳಿಸಬೇಕು. ಅದೇ ರೀತಿ ಮನಪಾ ಕಣ್ಣೂರಿನ ಕನ್ನಗುಡ್ಡೆಯಲ್ಲಿ 11.25 ಎಕ್ರೆ ಜಾಗವನ್ನು ಮನೆರಹಿತರಿಗಾಗಿ ಮೀಸಲಿಡಬೇಕು, ಫಲಾನುಭವಿಗಳನ್ನು ಅತಿ ಶೀಘ್ರದಲ್ಲಿ ಗುರುತಿಸಬೇಕು. ಫಲಾನುಭವಿಗಳ ಅಂತಿಮ ಲಿಸ್ಟ್ ಬಿಡುಗಡೆಗೊಳಿಸುವ ಮುನ್ನ ಮನಪಾ ಹೋರಾಟ ಸಮಿತಿಯ ಸದಸ್ಯರನ್ನು ಆಹ್ವಾನಿಸಿ ಸಭೆ ನಡೆಸಬೇಕು” ಎಂದು ಸಂತೋಷ್ ಹೇಳಿದ್ದಾರೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ನಗರ ಸಮಿತಿ ಅಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಹೋರಾಟ ಸಮಿತಿ ಸದಸ್ಯರಾದ ಪ್ರೇಮನಾಥ್ ಜಲ್ಲಿಗುಡ್ಡೆ, ಪ್ರಭಾವತಿ ಬೋಳಾರ್, ಮಂಜುಳಾ ಶೆಟ್ಟಿ, ನೂತನ್ ಕೊಂಚಾಡಿ, ಯೋಗಿನಿ ಬೋಳಾರ್ ಮೊದಲಾದವರು ಉಪಸ್ಥಿತರಿದ್ದರು.