ಕಾಗೋಡು ಆದೇಶಕ್ಕೆ ಮರ್ಯಾದೆ ಕೊಡದ ಕಂದಾಯ ಅಧಿಕಾರಿಗಳು

ಕಾಗೋಡು ತಿಮ್ಮಪ್ಪ

25 ವರ್ಷಗಳ ಹಳೆ ಅರ್ಜಿ, ಕೃಷಿ ಭೂಮಿ ಮಂಜೂರಿ ಇಲ್ಲ 

ವಿಶೇಷ ವರದಿ

ಮಂಗಳೂರು : ಕಳೆದ ಇಪ್ಪತ್ತೈದು ವರ್ಷಗಳಿಂದ ಕಂದಾಯ ಇಲಾಖೆಯ ವಿವಿಧ ಮಟ್ಟದ ಕಚೇರಿಗಳಲ್ಲಿ ಕೊಳೆಯುತ್ತಿರುವ ಕೃಷಿ ಭೂಮಿ ಅಕ್ರಮ ಸಕ್ರಮ (ಬಗರ್ ಹುಕುಂ) ಅರ್ಜಿಗಳನ್ನು ಕೂಡಲೇ ಇತ್ಯರ್ಥ ಮಾಡಬೇಕೆಂಬ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸೂಚನೆಯನ್ನು ಕಂದಾಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚು ಅಕ್ರಮ ಸಕ್ರಮ ಫಾರ್ಮ್ 50 ಮತ್ತು 53ರ ಪ್ರಕಾರ ರೈತರು ಸಲ್ಲಿಸರುವ ಅರ್ಜಿಯ ವಿಲೇವಾರಿ ಕಳೆದು 25 ವರ್ಷಗಳಿಂದ ಆಗಿಲ್ಲ. ರಾಜ್ಯದಲ್ಲಿ ನಾಲ್ಕು ಲಕ್ಷ ಅರ್ಜಿಗಳು ಬಾಕಿ ಉಳಿದಿವೆ.

ಕಾಗೋಡು ತಿಮ್ಮಪ್ಪ ಸ್ಪೀಕರ್ ಆಗಿದ್ದಾಗ ಮತ್ತು ಅನಂತರ ಕಂದಾಯ ಇಲಾಖೆ ಸಚಿವರಾದಾಗ ಬಗರ್ ಹುಕುಂ ಕೃಷಿಕರಿಗೆ ಸಾಗುವಳಿ ಚೀಟಿ ನೀಡುವುದು ಆದ್ಯತೆಯ ವಿಚಾರವೆಂದು ಹಲವು ಭಾರಿ ಘೋಷಣೆ ಮಾಡಿದ್ದರು. ಈ ನಿಟ್ಟಿನಲ್ಲಿ ಬೆಂಗಳೂರು ಮಟ್ಟದ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಸುತ್ತೋಲೆ ಮೇಲೆ ಸುತ್ತೋಲೆ ಕಳುಹಿಸಿದ್ದೇ ಬಂತು. ಗ್ರಾಮ ಲೆಕ್ಕಧಿಕಾರಿ, ಕಂದಾಯ ನಿರೀಕ್ಷಕ ಮತ್ತು ತಹಸೀಲ್ದಾರ್ ಮಟ್ಟದಲ್ಲಿ ಯಾವುದೇ ಪರಿಣಾಮ ಬೀರಿಲ್ಲ.

ಕಳೆದ ಜುಲೈನಲ್ಲಿ ಕಂದಾಯ ಇಲಾಖೆ ಎಲ್ಲ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರರಿಗೆ ಸುತ್ತೋಲೆಯೊಂದನ್ನು ಕಳುಹಿಸಿ ಪ್ರತಿ ಶನಿವಾರ ಶಾಸಕರ ಅಧ್ಯಕ್ಷತೆಯಲ್ಲಿರುವ ಅಕ್ರಮ ಸಕ್ರಮ ಭೂ ಮಂಜೂರು ಸಮಿತಿ ಸಭೆ ಅರ್ಜಿಗಳನ್ನು ಇತ್ಯರ್ಥ ಮಾಡಬೇಕೆಂದು ಆದೇಶ ನೀಡಿತ್ತು. ಶಾಸಕರ ಅನುಪಸ್ಥಿತಿಯಲ್ಲಿ ಸದಸ್ಯ ಕಾರ್ಯದರ್ಶಿಯಾಗಿರುವ ತಹಸೀಲ್ದಾರ್ ಕೇವಲ ಇಬ್ಬರು ಸದಸ್ಯರ ಕೋರಂ ಮೂಲಕ ಕೂಡ ಮಂಜೂರಾತಿ ನೀಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ತದನಂತರ, ಆಗಸ್ಟ್ ತಿಂಗಳಲ್ಲಿ ಮತ್ತೊಂದು ಸುತ್ತೋಲೆ ಕಳುಹಿಸಿದ ಕಂದಾಯ ಇಲಾಖೆ, ಅಧೀನ ಕಾರ್ಯದರ್ಶಿ ವಾರಕ್ಕೊಂದು ಬಾರಿ ಸಮಿತಿ ಸಭೆ ಸೇರಿದ ಬಗ್ಗೆ ತಿಂಗಳಿಗೆರಡು ಬಾರಿ ಸರಕಾರ ಇಮೇಲ್ ಮೂಲಕ ವರದಿ ಸಲ್ಲಿಸಬೇಕೆಂದು ಆದೇಶ ನೀಡಿದೆ. ಆದರೆ, ಅಧಿಕಾರಿಗಳು ಮಾತ್ರ ಪ್ರತಿ ತಾಲೂಕುಗಳಲ್ಲಿ ಸಾವಿರಾರು ಅರ್ಜಿಗಳು ಕಳೆದ ಇಪ್ಪತ್ತೈದು ವರ್ಷಗಳಿಂದ ಕೊಳೆಯುತ್ತಿದ್ದರೂ ಯಾವುದೇ ಮುತುವರ್ಜಿ ವಹಿಸಿರುವುದು ಕಂಡುಬರುತ್ತಿಲ್ಲ.

ರಾಜ್ಯ ಸರಕಾರ ಇಪ್ಪತ್ತಾರು ವರ್ಷಗಳ ಹಿಂದೆ ಕರ್ನಾಟಕ ಭೂ ಕಂದಾಯ ಅಧಿನಿಯಮ ಕಲಂ 94ರ ಪ್ರಕಾರ ಕೊನೆಯದಾಗಿ ಎರಡು ಬಾರಿ ಸರಕಾರಿ ಜಮೀನಿನಲ್ಲಿ ಕೃಷಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದ ಕೃಷಿಕರಿಗೆ ಸಾಗುವಳಿ ಚೀಟಿ ನೀಡಲು ಅರ್ಜಿ ಆಹ್ವಾನಿಸಿತ್ತು. ಲಕ್ಷಾಂತರ ಮಂದಿ ಕೃಷಿಕರು ಭೂಮಿ ಹಕ್ಕು ಪತ್ರ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ತಾಲೂಕ ತಹಸೀಲ್ದಾರ್, ಸ್ಥಳೀಯ ಶಾಸಕ, ಇತರ ನಾಮನಿರ್ದೇಶಿತ ಸದಸ್ಯರಿರುವ ಸಮಿತಿಯು ಭೂಮಿ ಮಂಜೂರು ಮಾಡುವ ಅಧಿಕಾರ ಹೊಂದಿರುತ್ತದೆ.

ಭೂಮಿ ಮಂಜೂರು ಮಾಡಲು ಸಂಬಂಧಪಟ್ಟ ಗ್ರಾಮ ಲೆಕ್ಕಿಗನು ಭೂಮಿಯನ್ನು ಅಳತೆ ಮಾಡಿ ಯಾವ ರೀತಿಯ ಕೃಷಿ ಇದೆ ಎಂಬ ಬಗ್ಗೆ ವರದಿಯನ್ನು ನಕ್ಷೆ ಸಹಿತ ನೀಡಬೇಕಾಗುತ್ತದೆ. ಗ್ರಾಮ ಲೆಕ್ಕಿಗ ನೀಡಿದ ವರದಿಯನ್ನು ಹೋಬಳಿಯ ಕಂದಾಯ ನಿರೀಕ್ಷಕ ಅನುಮೋದಿಸಬೇಕಾಗುತ್ತದೆ. ಅನಂತರ ಅಕ್ರಮ ಸಕ್ರಮ ಸಮಿತಿಯ ಮುಂದುಗಡೆ ಕೃಷಿ ಮಾಡುತ್ತಿದ್ದ ರೈತನ ಸಮಕ್ಷಮ ಫೈಲು ವಿಲೇವಾರಿ ಆಗುತ್ತದೆ.

ಅಕ್ರಮ ಸಕ್ರಮ ಕಾರ್ಯಕ್ರಮದ ಬಹುದೊಡ್ಡ ಲೋಪದೋಷವೇನೆಂದರೆ ಶ್ರೀಮಂತರು ಮತ್ತು ಈಗಾಗಲೇ ಜಮೀನು ಹೊಂದಿರುವ ಮಂದಿ ಸಂಬಂಧಪಟ್ಟ ಅಧಿಕಾರಿಗಳಿಗೆ ಲಂಚ ನೀಡಿ ಜಮೀನುಗಳ ಸಾಗುವಳಿ ಚೀಟಿ ಮತ್ತು ಅನಂತರದ ವರ್ಷಗಳಲ್ಲಿ ಹಕ್ಕುಪತ್ರ ಕೂಡ ಪಡೆದುಕೊಂಡಿದ್ದಾರೆ. ಹಿಂದಿನ ಕಾಲದಲ್ಲಿ ಉಳುವವನೇ ಹೊಲದೊಡೆಯ ಅಂತಿದ್ದರೆ ಅನಂತರ ಅದು ಉಳ್ಳವನೇ ಹೊಲದೊಡೆಯ ಎಂಬಂತಾಯಿತು.

ರಾಜಕೀಯ ಪ್ರಭಾವ ಇದ್ದವರು ಜಮೀನು ಮಾಡಿಕೊಂಡಿದ್ದರೆ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಹಿಂದುಳಿದ ವರ್ಗದವರಿಗೆ, ದಲಿತರಿಗೆ, ಪರಿಶಿಷ್ಟ ಪಂಗಡದವರ, ಕೃಷಿಕ ಮಹಿಳೆಯರ ಮತ್ತು ಬಡವರ ಅರ್ಜಿಗಳನ್ನು ಸಿದ್ಧಪಡಿಸುವ ಯಾವ ವ್ಯವಸ್ಥೆಯು ಇಲ್ಲದಿರುವುದು ಅಕ್ರಮ ಸಕ್ರಮ ಯೋಜನೆಯ ಬಹುದೊಡ್ಡ ಲೋಪದೋಷವಾಗಿದೆ.

ಕೇವಲ ರಾಜಕೀಯ ಪ್ರಭಾವ, ಸರಕಾರಿ ಕಚೇರಿಯ ಕಂಬ ಕಂಬಗಳನ್ನು ಸುತ್ತಲು ಸಾಮರ್ಥ್ಯವಿರುವ ಮತ್ತು ಲಂಚ ನೀಡಲು ಸಶಕ್ತರಾದವರಿಗೆ ಮಾತ್ರ ಜಮೀನುಗಳ ಸಾಗುವಳಿ ಚೀಟಿ ದೊರೆತಿದೆ. ಇನ್ನುಳಿದ ಮಂದಿಗೆ ತಾವು ಹೊಂದಿರುವ ಜಮೀನು ಕುರಿತು ವರದಿ ಸಲ್ಲಿಸಲು ಸಾಧ್ಯವಾಗಿಲ್ಲ. ಈ ಮಧ್ಯೆ, ದಕ್ಷಿಣ ಕನ್ನಡದಂತಹ ಜಿಲ್ಲೆಗಳಲ್ಲಿ ಬಲಾಢ್ಯ ಜಾತಿಯ ಮಂದಿ ತಮ್ಮ ಜಾತಿಬಲ, ತೋಳ್ಬಲ ಮತ್ತು ಹಣದ ಬಲದಿಂದ ಇಂತಹ ದೀನ ದಲಿತರ ಭೂಮಿಯನ್ನು ಅತಿಕ್ರಮಣ ಮಾಡಿ ತಮಗೆ ಜಮೀನು ಮಾಡಿಸಿಕೊಂಡ ಉದಾಹರಣೆ ಸಾಕಷ್ಟು ಇದೆ.

ಈ ಮಧ್ಯೆ, ಬಹಳಷ್ಟು ಮಂದಿ ಪೆÇೀರ್ಜರಿ ದಾಖಲೆಗಳ ಮೂಲಕ ಅಕ್ರಮ ಸಕ್ರಮ ಜಮೀನು ಸಾಗುವಳಿ ಚೀಟಿ ಪಡೆದುಕೊಂಡು ಅನಂತರ ದಕ್ಕಿಸಿಕೊಂಡ ಉದಾಹರಣೆಗಳು ಸಾಕಷ್ಟು ಇವೆ.

ಈ ಯೋಜನೆಯ ಬಹುದೊಡ್ಡ ಸಮಸ್ಯೆ ಏನೆಂದರೆ ಹೇಗೆ ಅರ್ಜಿಗಳನ್ನು ವಿಲೇವಾರಿ ಮಾಡಬೇಕೆಂಬ ಬಗ್ಗೆ ಸ್ಪಷ್ಟ ನಿರ್ದೇಶನ ಇಲ್ಲ. ಹಣ ಕೊಟ್ಟವರ ಜಮೀನಿನ ವರದಿ ಆಗುತ್ತದೆ. ಉಳಿದವರು ಬಗ್ಗೆ ಏನೂ ಇಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ಸಲ್ಲಿಸಲಾದ ಎಲ್ಲ ಅರ್ಜಿಗಳ ಜಮೀನುಗಳ ಅಳತೆ ಮಾಡಲು ಕ್ರಮಕೈಗೊಳ್ಳಬೇಕಾಗಿದೆ, ಅರ್ಜಿಗಳ ವಿಲೇವಾರಿಗೆ ಹೊಸ ಸೂತ್ರ ಕಂಡುಹುಡುಕಬೇಕಾಗಿದೆ. ಕಂದಾಯ ಇಲಾಖೆ ನೀಡುವ ಇಂತಹ ಸುತ್ತೊಲೆಗಳಿಂದ ಯಾವ ಪ್ರಯೋಜನವೂ ಬಡವರಿಗೆ ಆಗುವುದಿಲ್ಲ. ಕಂದಾಯ ಸಚಿವ ಕಾಗೋಡು ಅವರ ಕನಸು ನನಸಾಗುವುದಿಲ್ಲ ಎಂಬುದು ದಿಟ.