ಕುಖ್ಯಾತನೊಂದಿಗೆ ಕಾಣಿಸಿಕೊಂಡ ಲಾಲೂ ಪುತ್ರನ ರಾಜಕೀಯಕ್ಕೆ ಕುತ್ತು ಸಾಧ್ಯತೆ

ಪಾಟ್ನಾ : ಬಿಹಾರ ಆರೋಗ್ಯ ಸಚಿವ ತೇಜಪ್ರತಾಪ್ ಯಾದವನೊಂದಿಗೆ ಕುಖ್ಯಾತ ಕೊಲೆ ಆರೋಪಿಯೊಬ್ಬನ ಭಾವಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಗೊಂಡ ಹಿನ್ನೆಲೆಯಲ್ಲಿ ಯಾದವ್ ವಿರುದ್ಧ ಕೇಸು ದಾಖಲಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದರಿಂದ ಯಾದವ್ ರಾಜಕೀಯ ಜೀವನ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.

ತೇಜಪ್ರತಾಪ ಆರ್ ಜೆ ಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವರ ಹಿರಿಯ ಪುತ್ರನಾಗಿದ್ದಾನೆ. ಲಾಲೂರವರು ಬಿಹಾರ ಸೀಎಂ ನಿತೀಶ್ ಕುಮಾರ್ ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ.

ಸ್ಥಳೀಯ ಪತ್ರಕರ್ತ ರಾಜ್ದೇವ್ ರಾಜನ್ ಪತ್ನಿ ಆಶಾ ರಾಜನ್ ಸಲ್ಲಿಸಿದ್ದ ದೂರಿನನ್ವಯ ಸುಪ್ರೀಂ ಕೋರ್ಟ್ ಬುಧವಾರ ಈ ಆದೇಶ ಜಾರಿ ಮಾಡಿದೆ. ರಾಜ್ದೇವ್ ಕಳೆದ ವರ್ಷ ದುಷ್ಕರ್ಮಿಗಳ ಗುಂಡೇಟಿಗೆ ಸಾವನ್ನಪ್ಪಿದ್ದರು. ಎಪ್ರಿಲ್ 21ರಂದು ಮುಂದಿನ ಕೋರ್ಟ್ ವಿಚಾರಣೆ ನಡೆಯಲಿದೆ.

ಆರೋಗ್ಯ ಸಚಿವ ಯಾದವ್ ಕೊಲೆ ಆರೋಪಿ, ಕುಖ್ಯಾತ ಅಪರಾಧಿ ಮೊಹಮ್ಮದ್ ಕೈಫ್ ಜೊತೆಯಲ್ಲಿದ್ದ ಭಾವಚಿತ್ರವನ್ನು ಆಶಾ ಕ್ಲಿಕ್ಕಿಸಿಕೊಂಡಿದ್ದರು. ರಾಜ್ದೇವ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕೈಫ್ ಆಗಿದ್ದಾನೆಂದು ಪೊಲೀಸರು ಹೇಳಿದ್ದು, ಈತನೀಗ ಪೊಲೀಸರಿಂದ ತಲೆಮರೆಸಿಕೊಂಡಿದ್ದಾನೆ.