`ಬಾಹುಬಲಿ’ ಚಿತ್ರಕ್ಕೆ ಕೆಲಸ ಮಾಡಿದ್ದು ಲಕ್ಷ ಜನ!

`ಬಾಹುಬಲಿ’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿಯೇ ಮೈಲುಗಲ್ಲಿನ ಚಿತ್ರವೆಂದರೆ ತಪ್ಪಾಗಲಿಕ್ಕಿಲ್ಲ. ಹಲವು ದಾಖಲೆಗಳನ್ನು ಬರೆದಿರುವ ಈ ಸಿನಿಮಾ ಶೂಟಿಂಗಿನಲ್ಲೂ ದಾಖಲೆ ಬರೆದಿದೆ. ಎರಡು ಹಂತದಲ್ಲಿ ಚಿತ್ರೀಕರಣ ಮುಗಿಸಿರುವ `ಬಾಹುಬಲಿ 2′ ಸಿನಿಮಾದ ಶೂಟಿಂಗಿಗೆ ತೆಗೆದುಕೊಂಡಿದ್ದು ಬರೋಬ್ಬರಿ ಮೂರುವರೆ ವರ್ಷ. ಜೊತೆಗೇ ಒಂದು ಲಕ್ಷ ಮಂದಿ ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರಂತೆ.
ಚಿತ್ರತಂಡದವರೆಲ್ಲರೂ ಶೂಟಿಂಗ್ ಮುಗಿದ ಮೇಲೆ ಭಾವುಕರಾದರಂತೆ. ಇಷ್ಟು ದೊಡ್ಡ ಚಿತ್ರಕ್ಕೆ ಕೆಲಸ ಮಾಡಿದ ತೃಪ್ತಿ ಅವರಲ್ಲಿ ಕಾಣುತ್ತಿತ್ತು. ಇಡೀ ದೇಶವೇ ಎದುರು ನೋಡುತ್ತಿರುವ ಚಿತ್ರದಲ್ಲಿ ಕೆಲಸ ಮಾಡಿದ ಹೆಮ್ಮೆ ಅವರದು.
ಸಿನಿಮಾದ ಶೂಟಿಂಗ್ ಕೊನೆಯ ದಿನ ಎಲ್ಲರೂ ಒಂದೇ ರೀತಿಯ ಟೀಶರ್ಟ್ ತೊಟ್ಟು ಎಂಜಾಯ್ ಮಾಡಿದ್ದಾರೆ. ಅವರು ತೊಟ್ಟಿದ್ದ ಟೀ ಶರ್ಟ್ ಮೇಲಿನ ಬರಹ ಈಗ ಎಲ್ಲರ ಗಮನಸೆಳೆಯುತ್ತಿದೆ. ಆ ಬರಹ ಹೀಗಿದೆ..”ಒಂದು ಅದ್ಭುತವಾದ ಅನುಭವ, 5 ವರ್ಷಗಳು, 613 ದಿನಗಳ ಶೂಟಿಂಗ್, 2 ಬ್ಲಾಕ್ ಬಸ್ಟರ್, ಲಕ್ಷ ಮಂದಿ ಯೂನಿಟ್, ಇನ್ನು ನಾನು” ಎಂಬರ್ಥದ ಟೀ ಶರ್ಟ್‍ಗಳನ್ನು ಬಾಹುಬಲಿ ಯೂನಿಟ್ ಧರಿಸಿತ್ತು.
`ಬಾಹುಬಲಿ’ ಸಿನಿಮಾಗೆ ಲಕ್ಷ ಮಂದಿ ಕೆಲಸ ಮಾಡಿದ್ದಾರೆಂಬ ಸಾಲು ಎಲ್ಲರ ಕುತೂಹಲ ಕೆರಳಿಸಿದೆ. `ಬಾಹುಬಲಿ’ ಭಾರಿ ಬಜೆಟ್ ಚಿತ್ರ ಎನ್ನುವುದು ಎಲ್ಲರಿಗೂ ಗೊತ್ತಿದ್ದರೂ ಒಂದು ಲಕ್ಷ ಮಂದಿ ಕೆಲಸ ಮಾಡಿದ್ದಾರೆ ಎಂಬುದು ನಿಜಕ್ಕೂ ರೆಕಾರ್ಡ್ ಎಂತಲೇ ಅನ್ನಬಹುದು.