ಚಿಬಿದ್ರೆಯಲ್ಲಿ ಕುಸಿಯುತ್ತಿದೆ 22 ಲಕ್ಷ ರೂ ಕೆರೆ

 ಅನುದಾನ ಮಣ್ಣು ಪಾಲಾಗಲಿದೆಯೇ ? 

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಚಿಬಿದ್ರೆ ಗ್ರಾಮದಲ್ಲಿ ಇತ್ತೀಚೆಗಷ್ಟೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಬೃಹತ್ ಕೆರೆಯೊಂದು ಕುಸಿತ ತಡೆಯಲು ಕಲ್ಲು ಕಟ್ಟದಿರುವ ಕಾರಣ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಕುಸಿಯುತ್ತಿದ್ದು, ಕೆರೆಯ ಸನಿಹದ ಮನೆಯೊಂದು ಅಪಾಯದಲ್ಲಿದೆ.

ಚಾರ್ಮಾಡಿ ಗ್ರಾ ಪಂ ಆಡಳಿತಕ್ಕೊಳಪಟ್ಟ ಚಿಬಿದ್ರೆ ಬಳಿ ಸುಮಾರು 22 ಲಕ್ಷ ರೂಪಾಯಿ ವೆಚ್ಚದಲ್ಲಿ ಬೃಹತ್ ಸಾರ್ವಜನಿಕ ಕೆರೆಯೊಂದು ಇತ್ತೀಚೆಗಷ್ಟೆ ನಿರ್ಮಾಣಗೊಂಡಿದ್ದು, ಕುಸಿತ ತಡೆಯಲು ಕಲ್ಲು ಜೋಡಿಸದ ಪರಿಣಾಮ ದಿನೇ ದಿನೇ ಕುಸಿಯುತ್ತಿದೆ.  ಕೆಲ ಸಮಯದ ಹಿಂದೆ ದ ಕ ಜಿ ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ ಆರ್ ರವಿ ಚಿಬಿದ್ರೆ ಕೆರೆ ಕಾಮಗಾರಿ ವೀಕ್ಷಣೆಗೆ ಭೇಟಿ ನೀಡಿದ್ದು, ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಕೆರೆಯ ಬದಿಯಲ್ಲಿ ಅಪಾಯದಲ್ಲಿರುವ ಬೃಹತ್ ಮರಗಳನ್ನು ಮೆಸ್ಕಾಂ ಅಧಿಕಾರಿಗಳ ಸಹಕಾರದಿಂದ ಅರಣ್ಯ ಇಲಾಖೆ ಕಡಿಯುವ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಈ ಸಂದರ್ಭ ತಾ ಪಂ ಇಓ, ಗ್ರಾ ಪಂ ಪಿಡಿಓ ಮತ್ತು ಜಿ ಪಂ ಸದಸ್ಯರು, ಗ್ರಾ ಪಂ ಅಧ್ಯಕ್ಷೆಯೂ ಇದ್ದರು. ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಪಾಯದಲ್ಲಿರುವ ಮರಗಳನ್ನು ಕಡಿದು ಮುಂದಿನ ಕಾಮಗಾರಿಗೆ ಸ್ಪಂದಿಸುವಂತೆ ಸೂಚನೆ ನೀಡಿದ ಕಾರಣ ಇದೀಗ ಮರಗಳನ್ನು ಕಡಿಯಲಾಗಿದೆ. ಆದರೆ ಕೆರೆ ಬದಿಯ ಮನೆಯಲ್ಲಿರುವ ಪಿ ಕೆ ಇಸ್ಮಾಯಿಲ್ ಬಡ ಕುಟುಂಬ ಆತಂಕದಲ್ಲಿದೆ.

ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅನುದಾನ ಮತ್ತು ಜಿ ಪಂ ಸದಸ್ಯರ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಚಿಬಿದ್ರೆ ಕೆರೆಯು ಕುಸಿಯುತ್ತಿದ್ದು, ಸಂಪೂರ್ಣ ಕುಸಿದಲ್ಲಿ ಕೆರೆಯೂ ಮುಚ್ಚಿ ಹೋಗಿ ಪ್ರಮುಖ ರಸ್ತೆಯೊಂದು ಕೆರೆ ಪಾಲಾಗುವ ಅಪಾಯದಲ್ಲಿದೆ.