ಲಂಚ ಪಡೆಯುತ್ತಿದ್ದಾಗಲೇ ಮಹಿಳಾ ಭೂಸ್ವಾಧೀನಾಧಿಕಾರಿ ಎಸಿಬಿ ಬಲೆಗೆ

ಗಾಯತ್ರಿ ನಾಯಕರನ್ನು ಎಸಿಬಿ ಸಿಬ್ಬಂದಿ ಕಚೇರಿಯಿಂದ ಹೊರತರುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸಾರ್ವಜನಿಕರಿಂದ ಲಂಚ ಪಡೆಯುತ್ತಿದ್ದಾಗಲೇ ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂ ಸ್ವಾಧೀನಾಧಿಕಾರಿ ಗಾಯತ್ರಿ ಎನ್ ನಾಯಕ್ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಬಲೆಗೆ ಬಿದ್ದಿದ್ದಾರೆ. ಮಧ್ಯಾಹ್ನದಿಂದ ಸಂಜೆಯವರೆಗೂ ಸತತ ವಿಚಾರಣೆ ನಡೆಸಿದ ಎಸಿಬಿ ಅಧಿಕಾರಿಗಳು ಆಕೆಯಿಂದ ಮಹತ್ವಪೂರ್ಣ ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ವಿಚಾರಣೆ ಬಳಿಕ ಪೊಲೀಸರು ಗಾಯತ್ರಿ ನಾಯಕರನ್ನು ಕಚೇರಿಯಿಂದ ಹೊರಗಡೆ ಕರೆದುಕೊಂಡು ಬರುತ್ತಿದ್ದಂತೆ ಮಾಧ್ಯಮದವರನ್ನು ಕಂಡು ಕಕ್ಕಾಬಿಕ್ಕಿಯಾದ ಗಾಯತ್ರಿ ನಾಯಕ್, ದಾಪುಗಾಲು ಇಟ್ಟು ನೇರವಾಗಿ ಪೊಲೀಸ್ ಅಧಿಕಾರಿಗಳ ಜೀಪಿನೊಳಗೆ ಹೋಗಿ ಕುಳಿತುಕೊಂಡರು. ಅಲ್ಲದೆ ಮುಖವನ್ನು ಮುಚ್ಚಿಕೊಳ್ಳಲೆಂದು ಮಫ್ಲರ್ ಸುತ್ತಿಕೊಂಡರು.

ಕೇರಳ ಕಾಸರಗೋಡು ಜಿಲ್ಲೆಯ ಗಡಿ ಭಾಗದ ಮಂದಿ ಸೇರಿದಂತೆ ದ ಕ ಜಿಲ್ಲೆಯ ಹಲವರು ರಾಷ್ಟ್ರೀಯ ಹೆದ್ದಾರಿಗಾಗಿ ಜಮೀನು ಬಿಟ್ಟುಕೊಟ್ಟವರು ಪರಿಹಾರಕ್ಕೆ ಅಲೆದಾಡುತ್ತಿದ್ದಾರೆ. ಈ ನಡುವೆ ಯೋಗೀಶ್ ಎಂಬವರು ಕೂಡಾ ತಮ್ಮ ಜಮೀನು ಬಿಟ್ಟುಕೊಟ್ಟಿದ್ದು, ಪರಿಹಾರಕ್ಕೆ ಅಲೆದಾಡುತ್ತಿದ್ದರು. ಆದರೆ ಪರಿಹಾರ ಧನವನ್ನು ನೀಡಲು ಈಕೆ ನಿರಾಕರಿಸಿ, ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಚಾರದ ಬಗ್ಗೆ ಜೀವನ್ ಎಸಿಬಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ನಗರದ ಮಿನಿ ವಿಧಾನಸೌಧದ ಬಳಿಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ದಾಳಿ ಮಾಡಲಾಗಿದೆ.

ಎಸಿಬಿ ಅಧಿಕಾರಿಗಳು ಗಾಯತ್ರಿ ನಾಯಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮುಂದುವರಿಸಿದ್ದಾರೆ. ಯೋಗೀಶ್ ಎಂಬವರಿಂದ 1.30 ಲಕ್ಷ ರೂ ಲಂಚ ಸ್ವೀಕರಿಸಿದ್ದರು ಎನ್ನುವ ಆರೋಪ ಇವರ ಮೇಲಿದ್ದು, ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಯೋಗೀಶ್ 20 ಸಾವಿರ ರೂ ಲಂಚ ನೀಡುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಹಿಂದೆ ಗಾಯತ್ರಿ ನಾಯಕ್ ಹೊನ್ನಾವರ, ಕುಂದಾಪುರ ಮೊದಲಾದೆಡೆ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗಷ್ಟೇ ಈ ಹುದ್ದೆಗೆ ಆಗಮಿಸಿದ್ದರು. ಗಾಯತ್ರಿ ಅವರಿಗೆ ದೊಡ್ಡ ಮಟ್ಟದ ನಗದು ಹಣದ ಆಸೆ ಇಲ್ಲದಿದ್ದರೂ ಪೂರಕ ಕೆಲಸ ಮಾಡಿಸಿಕೊಂಡವರಿಂದ ಚಿಕ್ಕ ಪುಟ್ಟ ಕಿರುಕಾಣಿಕೆಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.