ಲೇಡಿಗೋಷನ್ ಆಸ್ಪತ್ರೆಯ ಹೊಸ ಕಟ್ಟಡ ಮಾರ್ಚಿನಲ್ಲಿ ಉದ್ಘಾಟನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ನೂತನ ಕಟ್ಟಡ 2017ರ ಮಾರ್ಚ್ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಸದ್ಯಕ್ಕೆ ಕಟ್ಟಡ ಕಾಮಗಾರಿ ಕೆಲಸ ನಿಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಮರು ಆರಂಭಗೊಳ್ಳಲಿದೆ” ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶಕುಮಾರ್ ಹೇಳಿದ್ದಾರೆ.

“ಉಳಿದ ಕಾಮಗಾರಿ ಕೆಲಸಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಟೆಂಡರು ಪ್ರಕ್ರಿಯೆ ಪ್ರಗತಿಯಲ್ಲಿದೆ. ಸುಮಾರು 3 ಕೋಟಿ ರೂ ವೆಚ್ಚದ ಈ ಯೋಜನೆಗೆ ಸರ್ಕಾರವು ಸೌಲಭ್ಯಗಳನ್ನು ಅಳವಡಿಸಲು 10 ಕೋಟಿ ರೂ ಬಿಡುಗಡೆ ಮಾಡಲಿದೆ. ಈ ಕಟ್ಟಡ 500 ಬೆಡ್ ಹೊಂದಿರುತ್ತದೆ. ಈ ಕಟ್ಟಡವು ರಾಮಮೋಹನ್ ಲೋಹಿಯಾ ಜನ್ಮ ಜಯಂತಿಯ ದಿನ ಅಂದರೆ  ಮಾರ್ಚ್ 23ರಿಂದ ಸಂಪೂರ್ಣ ಕಾರ್ಯನಿರ್ವಹಣೆ ಆರಂಭಿಸಲಿದೆ” ಎಂದು ಅವರು ಹೇಳಿದ್ದಾರೆ.

ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯು ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಜನನಿಬಿಡವಾದ ಹೆರಿಗೆ ಆಸ್ಪತ್ರೆ. ಹೊಸ ಕಟ್ಟಡ ನಿರ್ಮಾಣಕ್ಕಾಗಿ ಲೇಡಿಗೋಷನ್ ಆಸ್ಪತ್ರೆಯ ಒಂದು ಭಾಗವನ್ನು ಧ್ವಂಸಗೊಳಿಸಿದ ಬಳಿಕ ಜಾಗದ ಸಮಸ್ಯೆಯಿಂದ ರೋಗಿಗಳು ಪರದಾಡುತ್ತಿದ್ದರು. ಹೊಸ ಕಟ್ಟಡ ಕಾಮಗಾರಿ 2011ರಲ್ಲಿ ಆರಂಭಿಸಲಾಗಿದ್ದರೂ ಹಣಕಾಸಿನ ಕೊರತೆಯಿಂದ ಕಾಮಗಾರಿ ತೆವಳುತ್ತಾ ಸಾಗಿತ್ತು.

ಇದೇ ವೇಳೆ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿರುವ ಮಕ್ಕಳ ಆರೋಗ್ಯ ಕೇಂದ್ರವನ್ನು ಪ್ರಾದೇಶಿಕ ಮಕ್ಕಳ ಆರೋಗ್ಯ ಸಂಸ್ಥೆಯಾಗಿ ಮೇಲ್ದರ್ಜೆಗೇರಿಸಲಾಗುವುದು, ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ಮಾದರಿಯಲ್ಲಿ ಸುಸಜ್ಜಿತ ಸೌಲಭ್ಯಗಳನ್ನು ಅಳವಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.