ಸೌಜನ್ಯದ ಪ್ರತಿರೂಪ ಈ ಮಹಿಳಾ ಕಂಡಕ್ಟರುಗಳು

ಚಂಡೀಗಢ ಆಡಳಿತವು ತನ್ನ ನಗರ ಸಾರಿಗೆ ಬಸ್ಸುಗಳಿಗೆ 72 ಮಂದಿ ಮಹಿಳಾ ಕಂಡಕ್ಟರುಗಳನ್ನು ನೇಮಿಸಿ ಮೂರು ವರ್ಷಗಳಾಗಿವೆ. ಅಂದಿನಿಂದ ಈ ಉತ್ಸಾಹಿ ಮಹಿಳೆಯರು ಬಸ್ಸಿನ ಚಾಲಕನ ಪಕ್ಕದ ಅಡ್ಡ ಸೀಟನ್ನು ತಮ್ಮ ಮನೆಯನ್ನಾಗಿಸಿದ್ದಾರೆ. ಇಲ್ಲಿ ಕುಳಿತುಕೊಂಡು ಅವರು ಪ್ರಯಾಣಿಕರಿಂದ ಹಣ ಸಂಗ್ರಹಿಸಿ ಟಿಕೆಟ್ ನೀಡುತ್ತಾರೆ, ಸ್ಟಾಪ್ ಬಂದಾಗ ವಿಶಿಲ್ ಊದುತ್ತಾರೆ ಹಾಗೂ ಬಹಳಷ್ಟು ತಾಳ್ಮೆಯಿಂದ, ಸೌಜನ್ಯದಿಂದ ಹಾಗೂ ಶಿಸ್ತುಬದ್ಧವಾಗಿ ತಮ್ಮ ಕರ್ತವ್ಯ ನಿರ್ವಹಿಸಿ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಸ್ಸುಗಳಲ್ಲಿನ ಈ ಮಹಿಳಾ ಕಂಡಕ್ಟರುಗಳಿಂದಾಗಿ ಮಹಿಳಾ ಪ್ರಯಾಣಿಕರಿಗೆ ಬಸ್ ಪ್ರಯಾಣ ಹೆಚ್ಚು ಸುರಕ್ಷಿತವಾಗಿ ಬಿಟ್ಟಿದೆ. “ಅವರು ನಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಾರೆ, ಆದರೆ ಪುರುಷ ಕಂಡಕ್ಟರುಗಳು ಈ ವಿಷಯದಲ್ಲಿ ಏನೇನೂ ಸಹಾಯ ಮಾಡುವುದಿಲ್ಲ” ಎನ್ನುತ್ತಾರೆ ಪ್ರಯಾಣಿಕರಲ್ಲೊಬ್ಬರಾದ ವಂದನಾ.

“ಪುರುಷ ಕಂಡಕ್ಟರುಗಳಿಗಿಂತ ಮಹಿಳಾ ಕಂಡಕ್ಟರುಗಳು ಹೆಚ್ಚು ಸಹಕಾರಿ ಮನೋಭಾವ ಹೊಂದಿರುತ್ತಾರೆ ಹಾಗೂ ಸೌಜನ್ಯದಿಂದ ವರ್ತಿಸುತ್ತಾರೆ” ಎಂಬ ಪ್ರಶಂಸೆಯ ಮಾತುಗಳು ಇನ್ನೊಬ್ಬಳು ಪ್ರಯಾಣಿಕೆ ಸಿಮ್ರಾನ್ ಅವರಿಂದ ಕೇಳಿ ಬಂದಿದೆ.

ಕೈಥಾಲ್ ಎಂಬ ಗ್ರಾಮದವರಾದ ನರೇಶ್ ಕುಮಾರಿ ಕಳೆದ ಎರಡೂವರೆ ವರ್ಷಗಳಿಂದ 2ಸಿ ರೂಟ್ ಬಸ್ಸಿನ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. “ನನ್ನ ನೌಕರಿ ನನಗೆ ಸಮಾಧಾನ ನೀಡಿದೆ. ಆರಂಭದಲ್ಲಿ ಸ್ವಲ್ಪ ಅನಾನುಕೂಲತೆಯಾಗುತ್ತಿದ್ದರೂ ಈಗ ಎಲ್ಲವೂ ಸರಿಯಾಗಿದೆ”’ ಎಂದು ಅವರು ಹೇಳುತ್ತಾರೆ. ಕರ್ತವ್ಯ ನಿರ್ವಹಿಸುವ ಸಂದರ್ಭ ಎದುರಿಸುವ ಸವಾಲುಗಳ ಬಗ್ಗೆ ಕೇಳಿದಾಗ “ಕೆಲವೊಮ್ಮೆ ಪ್ರಯಾಣಿಕರು ಸಣ್ಣಪುಟ್ಟ ಕಾರಣಗಳಿಗಾಗಿ ಜಗಳವಾಡುತ್ತಾರೆ. ಆದರೆ ಇಲ್ಲಿಯ ತನಕ ಚುಡಾವಣೆ ಯಾ ಲೈಂಗಿಕ ಕಿರುಕುಳದಂತಹ ಗಂಭೀರ ಸಮಸ್ಯೆ ಎದುರಾಗಿಲ್ಲ” ಎಂದರು.

ರಾಮಘರ್ ಎಂಬಲ್ಲಿಂದ ಪ್ರತಿ ದಿನ ಬೆಳಿಗ್ಗೆ 4ರ ಹೊತ್ತಿಗೆ ಮನೆ ಬಿಟ್ಟು ಒಂದು ಗಂಟೆ ಆಕ್ಟಿವಾದಲ್ಲಿ ಪ್ರಯಾಣಿಸಿ 5.30ರ ಸುಮಾರಿಗೆ ತನ್ನ ಕರ್ತವ್ಯದ ಸ್ಥಳಕ್ಕೆ ಹಾಜರಾಗುವ ರೀತು, ಸಂಜೆ ಕರ್ತವ್ಯ ಮುಗಿಸುವಾಗ 9.30 ಆಗುತ್ತದೆ. ನಂತರ ಮನೆ ತಲುಪುವಾಗ ರಾತ್ರಿ 11ರ ಮೇಲಾಗುತ್ತದೆ ಎಂದು ವಿವರಿಸುತ್ತಾರೆ. ಇಲಾಖೆ ದಿನದ ಶಿಫ್ಟಿನಲ್ಲಿ ಸೇವೆ ಸಲ್ಲಿಸಲು ಮಹಿಳೆಯರಿಗೆ ಆದ್ಯತೆ ನೀಡಬೇಕು ಹಾಗೂ ಸಂಜೆಯ ಶಿಫ್ಟುಗಳನ್ನು ಪುರುಷ ಕಂಡಕ್ಟರುಗಳಿಗೆ ವಹಿಸಬೇಕು ಎಂದು ಅವರು ಹೇಳುತ್ತಾರೆ.

ನಗುಮೊಗದಿಂದ ಸೇವೆ ಸಲ್ಲಿಸುವ ಈ ಮಹಿಳಾಮಣಿಗಳಿಗೆ ಕಷ್ಟಗಳು ಇಲ್ಲವೆಂದೇನಿಲ್ಲ. ನಿಲ್ದಾಣಗಳಲ್ಲಿ ಸ್ವಚ್ಛ ಶೌಚಾಲಯ ಹಾಗೂ ವಾಶ್ ರೂಮುಗಳು ಇಲ್ಲವೆನ್ನುವ ಕೊರಗು ಅವರಿಗಿದೆ. ಕೆಲವೆಡೆ ಅವರಿಗೆ ಸ್ವಲ್ಪ ವಿರಮಿಸಲೂ ಯಾವುದೇ ಸ್ಥಳಾವಕಾಶ ಯಾ ಸೌಲಭ್ಯ ಇರುವುದಿಲ್ಲ ಎಂದು ಕೆಲವರು ದೂರುತ್ತಾರೆ.

ತಾವು ಧರಿಸುವ ಸಮವಸ್ತ್ರದಿಂದಾಗಿ ದೂರದಿಂದ ಮಹಿಳಾ ಕಾನಸ್ಟೇಬಲ್ಲುಗಳ ಥರವೇ ಕಾಣಿಸುವ ಈ ಮಹಿಳಾ ಕಂಡಕ್ಟರುಗಳು ಮಹಿಳಾ ಸಬಲೀಕರಣಕ್ಕೊಂದು ಜ್ವಲಂತ ಉದಾಹರಣೆಯಾಗಿದ್ದಾರೆ, ಆತ್ಮವಿಶ್ವಾಸದ ಪ್ರತೀಕದಂತಿದ್ದಾರೆ. ನಗುಮೊಗದಿಂದ ದಿನವಿಡೀ ಸೇವೆ ಸಲ್ಲಿಸುವ ಅವರು ತಾವು ಕರ್ತವ್ಯ ನಿರ್ವಹಿಸುವಾಗ ಎದುರಿಸುವ ಎಡರುತೊಡರುಗಳ ಬಗ್ಗೆ ಯಾವುದೇ ಕುರುಹು ತೋರಿಸುವುದಿಲ್ಲ.

ಎಲ್ಲಾ ರಾಜ್ಯ ಸಾರಿಗೆ ಸಂಸ್ಥೆಗಳು ಹಾಗೂ ಖಾಸಗಿ ಬಸ್ಸುಗಳೂ ಕಂಡಕ್ಟರುಗಳ ಹುದ್ದೆಗೆ ಹೆಚ್ಚು ಹೆಚ್ಚು ಮಹಿಳೆಯರನ್ನೂ ನೇಮಿಸಲು ಇದು ಸಕಾಲ ಅಲ್ಲವೇ ?