ಬಿಜೆಪಿ ಪಾದಯಾತ್ರೆ ನೀರಸವಾಯಿತೇ ?

ನಿರೀಕ್ಷಿತ ಮಟ್ಟದಲ್ಲಿ ಸೇರದ ಕಾರ್ಯಕರ್ತರು

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ದೇಯಿ ಬೈದೆತಿ ಔಷಧಿ ವನದಲ್ಲಿರುವ ಬೈದೆತಿ ಪ್ರತಿಮೆಗೆ ಅವಮಾನ ಮಾಡಿರುವುದನ್ನು ಖಂಡಿಸಿ ಬಿಜೆಪಿ ವತಿಯಿಂದ ಪಾದಯಾತ್ರೆ ನಡೆದಿದ್ದು, ಯಾತ್ರೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಾರ್ಯಕರ್ತರು ಭಾಗಿಯಾಗದೆ ಪ್ರತಿಭಟನೆ ನೀರಸವಾಗಿದ್ದು ಕೆಲವು ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ.

ಬೈದೆತಿ ಪುತ್ಥಳಿಗೆ ಕೆಲವು ದಿನಗಳ ಹಿಂದೆ ಸ್ಥಳೀಯ ಯುವಕನೊಬ್ಬ ಅಶ್ಲೀಲವಾಗಿ ಫೋಟೋ ತೆಗೆದು ಅದನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದ. ಇದರ ವಿರುದ್ಧ ಬಿಲ್ಲವ ಸಂಘದ ಮುಖಂಡರು ಪೊಲೀಸರಿಗೆ ದೂರು ನೀಡಿದ್ದು, ದೂರು ನೀಡಿದ ಮೂರು ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಗಿತ್ತು. ಇದೇ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕೆಸರೆರಚಾಟವೂ ನಡೆಸುತ್ತಿತ್ತು. ಆರೋಪಿಯ ಬಂಧನವಾದ ಬಳಿಕವೂ ಬಿಜೆಪಿ ಪ್ರತಿಭಟನೆ ಮಾಡುವುದು ಸರಿಯಲ್ಲ, ಒಬ್ಬ ವ್ಯಕ್ತಿ ಮಾಡಿದ ತಪ್ಪನ್ನು ಸಮುದಾಯದ ಮೇಲೆ ಹೊರಿಸುವುದು ನ್ಯಾಯವಲ್ಲ ಎಂದು ಕಾಂಗ್ರೆಸ್ಸಿನವರು ಹೇಳಿಕೆ ನೀಡಿದರೆ, ಜಿಲ್ಲೆಯ ಮತಾಂಧ ಶಕ್ತಿಗಳನ್ನು ಕಾಂಗ್ರೆಸ್ ಪೋಷಣೆ ಮಾಡುತ್ತಿದೆ, ಹಿಂದೂ ದೇವರುಗಳನ್ನು ಅಪಮಾನಿಸುವ ಕಾರ್ಯ ಮತಾಂಧರಿಂದ ಆಗುತ್ತಿದೆ. ಇದರ ವಿರುದ್ಧ ಜನಜಾಗೃತಿ ಮಾಡಿಯೇ ಸಿದ್ಧ ಎಂದು ಬಿಜೆಪಿ ಹೇಳಿತ್ತು. ಇದರ ಭಾಗವಾಗಿ ಪುತ್ತೂರಿನ ದೇವಳದ ಬಳಿಯಿಂದ ಪಟ್ಟೆಯ ದೇಯಿ ಬೈದೆತಿ ವನದವರೆಗೂ ಮಂಗಳವಾರ ಬಿಜೆಪಿ ಪಾದಯಾತ್ರೆ ಕೈಗೊಂಡಿತ್ತು. ಪಾದಯಾತ್ರೆಯಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇತ್ತು . ಆದರೆ ಯಾತ್ರೆಯಲ್ಲಿ ನೂರಾರು ಜನರು ಭಾಗವಹಿಸಿದ್ದು, ಪ್ರತಿಭಟನೆಗೆ ಕಾರ್ಯಕರ್ತರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾದಂತೆ ಕಂಡು ಬಂದಿತ್ತು.

ಪುತ್ತೂರಿನಿಂದ ಸುಮಾರು 16 ಕಿ ಮೀ ಪಾದಯಾತ್ರೆ ಮಾಡಬೇಕಾಗಿರುವ ಕಾರಣ ನಡೆದುಕೊಂಡು ಅಷ್ಟು ದೂರ ಸಾಗಲು ಒಪ್ಪದ ಕೆಲವು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸದೆ ಸಮಾರೋಪ ಸಮಾರಂಭದಲ್ಲಿ ಮಾತ್ರ ಭಾಗವಹಿಸಿದ್ದರು ಎನ್ನಲಾಗಿದೆ. ಪಾದಯಾತ್ರೆಯ ವೇಳೆ ಕೆಲವು ನಾಯಕರು ಕಾಣಿಸಿಕೊಳ್ಳದೇ ಇರುವುದು ಕಾರ್ಯಕರ್ತರ ಮನಸ್ಸಿಗೂ ಬೇಸರವನ್ನುಂಟು ಮಾಡಿದೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.