ಶಿವರಾಮ ಕಾರಂತ ಬಾಲವನ ಅಭಿವೃದ್ಧಿ ಇಚ್ಛಾಶಕ್ತಿ ಸಾಹಿತಾಸಕ್ತಿ ಇಲ್ಲದ ಅಧಿಕಾರಿಗಳು

ಪುತ್ತೂರು ನಗರದಲ್ಲಿ ಸಾಹಿತ್ಯ ದಿಗ್ಗಜ ಕೋಟ ಶಿವರಾಮ ಕಾರಂತರು ಸರಕಾರಕ್ಕೆ ನೀಡಿರುವ `ಬಾಲವನ’ ಸಾಂಸ್ಕøತಿಕ ಸಾಹಿತ್ಯ ಚಟುವಟಿಕೆಗಳ ಕೇಂದ್ರ ಆಗಬೇಕಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರವಾಸಿಗರನ್ನು, ಸಾಹಿತ್ಯಾಸಕ್ತರನ್ನು ಮತ್ತು ಕಾರಂತಾಭಿಮಾನಿಗಳನ್ನು ಆಕರ್ಷಿಸುತ್ತಿಲ್ಲ. ಕನ್ನಡ ಸಂಸ್ಕøತಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೆ ? ರಾಜ್ಯ ಮಟ್ಟದ ಬಾಲವನ ಅಭಿವೃದ್ಧಿ ಸಮಿತಿ ರಚಿತವಾಗಿದ್ದರೂ ಆ ಸಮಿತಿಯ ನಿರ್ಣಯಗಳನ್ನು ಕಾಲಮಿತಿಯಲ್ಲಿ ಅನುಷ್ಠಾನ ಮಾಡದಿರುವುದು ಯಾಕಾಗಿ ? ಸ್ಥಳೀಯವಾಗಿ ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳು, ಕನ್ನಡ ಸಂಸ್ಕøತಿ ಇಲಾಖೆ ಉಪನಿರ್ದೇಶಕರು ಬಾಲವನ ಅಭಿವೃದ್ಧಿಗಾಗಿ ಕಿಂಚಿತ್ತೂ ಬೆಲೆ ನೀಡುತ್ತಿಲ್ಲ.
ಸದರಿ ಬಾಲವನದಲ್ಲಿ ಮಲ್ಟಿಜಿಮ್ ಸಾಧನಗಳನ್ನು ಪುತ್ತೂರು, ತಾಲೂಕು ಕ್ರೀಡಾಂಗಣಕ್ಕೆ ಸ್ಥಳಾಂತರಿಸಲು ನಿರ್ಣಯ ಕೈಗೊಂಡರೂ ಎಂಟು ತಿಂಗಳಿನಿಂದಲೂ ಸ್ಥಳಾಂತರ ಪ್ರಕ್ರಿಯೆ ನಡೆದಿಲ್ಲ.
ಕನ್ನಡ ಸಂಸ್ಕøತಿ ಇಲಾಖೆಯ ಸಂಸದೀಯ ಕಾರ್ಯದರ್ಶಿಯೂ ಆಗಿರುವ ಸ್ಥಳೀಯ ಶಾಸಕಿಯವರು ಕಾರಂತ ಬಾಲವನ ಹೇಗಿರಬೇಕು, ಹೇಗಾಗಬೇಕು, ಅಲ್ಲಿಯ ಚಟುವಟಿಕೆಗಳ ಇತಿಮಿತಿ ಏನು, ರಾಜ್ಯ ಮಟ್ಟದ ಸಮಿತಿಯ ಹಿರಿಯ ಸದಸ್ಯರ ನಿರೀಕ್ಷೆಗಳೇನು ಎಂಬೆಲ್ಲ ವಿಚಾರಗಳ ಬಗ್ಗೆ ಮಾಹಿತಿ ಪಡೆಯದೆ ಸರ್ವಾಧಿಕಾರಿ ಧೋರಣೆ ತೋರುವುದು ಆಕ್ಷೇಪಾರ್ಹವಾದುದು.
ಕಾರಂತಾಭಿಮಾನಿಗಳು `ಕಾರಂತ ಬಾಲವನ ಉಳಿಸಿ’ ಎಂಬ ಆಂದೋಲನಕ್ಕೆ ರಾಜ್ಯದೆಲ್ಲೆಡೆಯ ಕಾರಂತಾಭಿಮಾನಿಗಳ ಜತೆ ಸಮಾಲೋಚಿಸುತ್ತಿರುವರೆಂದು ಹೇಳಲಾಗಿದೆ.
ಮಂಜೇಶ್ವರದಲ್ಲಿ ರಾಷ್ಟ್ರಕವಿ ಮಂಜೇಶ್ವರ, ಗೋವಿಂದ ಪೈಯವರ `ಗಿಳಿವಿಂಡು’ ಪುನಶ್ವೇತನಗೊಂಡು ಲೋಕಾರ್ಪಣೆ ಆಗುತ್ತಿರುವುದು ಸ್ವಾಗತಾರ್ಹವಾದುದು. ಕಾರಂತರ `ಬಾಲವನ’ವೂ ಅಭಿವೃದ್ಧಿಯಾಗಲು ಅಧಿಕಾರಿಗಳ ಅಸಡ್ಡೆ, ಶಾಸಕಿಯವರ ಸರ್ವಾಧಿಕಾರ ಧೋರಣೆ ಕಾರಣವಾಗಿರುವುದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೂ ತಿಳಿಸಬೇಕಾಗಿದೆ

  • ಕೆ ಸುಮಂತ  ಪುತ್ತೂರು