ಕಟ್ಟಡದಿಂದ ವಿದ್ಯುತ್ ತಂತಿ ಮೇಲೆ ಬಿದ್ದ ಕಾರ್ಮಿಕ ಪಾರು

ನಮ್ಮ ಪ್ರತಿನಿಧಿ ವರದಿ

ಉಡುಪಿ : ಕಾರ್ಮಿಕನೊಬ್ಬ ಕಟ್ಟಡದಿಂದ ಆಯತಪ್ಪಿ ನೇರವಾಗಿ ಹೈಟೆನ್ಶನ್ ವಿದ್ಯುತ್ ತಂತಿ ಮೇಲೆ ಬಿದ್ದು ಕೈ ಸುಟ್ಟುಕೊಂಡು ಪ್ರಾಣಾಪಾಯದಿಂದ ಪಾರಾದ ಘಟನೆ ಉಡುಪಿಯ ಕುಂಜಿಬೆಟ್ಟು ವಾರ್ಡಿನ ಕಟ್ಟೆ ಆಚಾರ್ಯ ಮಾರ್ಗದಲ್ಲಿ ನಡೆದಿದೆ.

ಕಟ್ಟಡ ಕಾರ್ಮಿಕನಾಗಿರುವ ಬಿಲಾಲ್ (27) ಗಾಯಗೊಂಡಾತ. ಈತ ಸಂತೆಕಟ್ಟೆ ನಿವಾಸಿ. ಮಂಗಳೂರು ಮೂಲದ ವ್ಯಕ್ತಿಯೊಬ್ಬ ಕುಂಜಿಬೆಟ್ಟು ವಾರ್ಡಿನ ಕಟ್ಟೆ ಆಚಾರ್ಯ ಮಾರ್ಗದಲ್ಲಿರುವ ವಸತಿ ಸಮುಚ್ಚಯ ಕಟ್ಟಡದ ಕೆಲಸವನ್ನು ನಿರ್ವಹಿಸಿಕೊಂಡಿದ್ದು, ಇಲ್ಲಿ ಕೆಲಸಮಾಡುತ್ತಿದ್ದ ಬಿಲಾಲ್ ಕಟ್ಟಡದಿಂದ ಆಯತಪ್ಪಿ ಕಟ್ಟಡಕ್ಕೆ ತಾಗಿಕೊಂಡಿದ್ದ ಹೈಟೆನ್ಶನ್ ಕಂಬದಿಂದ ಹೋಗಿರುವ ತಂತಿ ಮೇಲೆ ಬಿದ್ದಿದ್ದಾನೆ.

ಬೀಳುವ ಸಂದರ್ಭ ಈತನ ಕೈ ನೇರವಾಗಿ ತಂತಿ ಮೇಲೆ ಬಿದ್ದ ಪರಿಣಾಮ ಕೈ ಸುಟ್ಟುಹೋಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.  ಈ ಕಟ್ಟಡ ರಸ್ತೆಗೆ ತಾಗಿಯೇ ಇದ್ದ ಕಾರಣ ಮತ್ತು ಯಾವುದೇ ಸೆಟ್ ಬ್ಯಾಕ್ ಇಲ್ಲದಿರುವುದು ಕೂಡಾ ಆತನ ಕೈ ತಂತಿಗೆ ತಾಗಲು ಕಾರಣವಾಗಿದೆ ಎಂದು ತಿಳಿದುಬಂದಿದೆ.