ಬೋರ್ವೆಲ್ ಕಾಮಗಾರಿ ವೇಳೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವು

ಇನ್ನೊಬ್ಬ ಗಂಭೀರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೋಟೆಕಾರು ಬೀರಿ ಬಳಿ ಬೋರ್ವೆಲ್ ಕೊರೆಯುವ ಕಾಮಗಾರಿ ವೇಳೆ ಪೈಪ್ ಮೇಲಕ್ಕೆತ್ತುವ ಸಂದರ್ಭದಲ್ಲಿ ಹೈಟೆನ್ಶನ್ ತಂತಿ ತಗಲಿ ಕೊಣಾಜೆ ಅಡ್ಕರೆಪಡ್ಪು ನಿವಾಸಿ ಹಸೈನಾರ್ ಎಂಬವರ ಪುತ್ರ ಉಸ್ಮಾನ್ (20) ಸಾವನ್ನಪ್ಪಿದ್ದಾರೆ.

ಗಂಭೀರ ಗಾಯಗೊಂಡ ಕೊಣಾಜೆ ತಿಬ್ಲೆ ಪದವು ನಿವಾಸಿ ಶರೀಫ್(25) ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಸ್ಥಳೀಯ ನಿವಾಸಿ ಖಲೀಲ್ ಎಂಬವರು ಬೋರ್ವೆÉಲ್ ಕೊರೆಯುವುದಕ್ಕೆ ಗುತ್ತಿಗೆಯನ್ನು ಪಡೆದುಕೊಂಡಿದ್ದರು.

ಕಾಮಗಾರಿಯಲ್ಲಿ 6 ಮಂದಿ ಕಾರ್ಮಿಕರು ಗುರುವಾರದಂದು ನಿರತರಾಗಿದ್ದರು. ಸುಮಾರು ನಾಲ್ಕು ಪೈಪುಗಳನ್ನು ಮೇಲಕ್ಕೆತ್ತಿದ್ದ ಉಸ್ಮಾನ್ ಮತ್ತೆ ಶರೀಫ್ ಅವರು ಐದನೇ ಪೈಪನ್ನು ಮೇಲಕ್ಕೆತ್ತುವ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಕಬ್ಬಿಣದ ಪೈಪ್ ಮೇಲಕ್ಕೆ ತೆಗೆಯುತ್ತಿದ್ದಂತೆ ಪೈಪ್ ಮೇಲಿದ್ದ ಹೈಟೆನ್ಶನ್ ತಂತಿಗೆ ತಗಲಿದೆ. ಪರಿಣಾಮ ಶರೀಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ಉಸ್ಮಾನ್ ಹೆತ್ತವರಿಗೆ ಓರ್ವನೇ ಪುತ್ರನಾಗಿದ್ದ. 9ನೇ ತರಗತಿ ಮುಗಿಸಿದ ಬಳಿಕ ಮನೆಯಲ್ಲೇ ಉಳಿದುಕೊಂಡಿದ್ದ ಈತ ಕೂಲಿ ಕೆಲಸ ಇದ್ದಾಗ ಮಾತ್ರ ಹೋಗುತ್ತಿದ್ದ.

ಏನೂ ಕೆಲಸ ಗೊತ್ತಿಲ್ಲದವರನ್ನು ಕೆಲಸಕ್ಕೆ ಕರೆದುಕೊಂಡು ಬಂದು ಕಡಿಮೆ ಸಂಬಳಕ್ಕೆ ದುಡಿಸುತ್ತಿದ್ದ ಕಾರಣದಿಂದಲೇ ಅನುಭವ ಇಲ್ಲದ ಉಸ್ಮಾನ್ ಸಾವನ್ನಪ್ಪಲು ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಗುತ್ತಿಗೆದಾರ ಖಲೀಲ್ ತಲೆಮರೆಸಿಕೊಂಡಿದ್ದಾನೆ. ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ.