ಮಡಿಕೇರಿಯಲ್ಲಿ ಕಾಡಾನೆ ದಾಳಿಗೆ ಕಾರ್ಮಿಕ ಬಲಿ

ದುರಂತ ಸ್ಥಳದಲ್ಲಿ ಸೇರಿದ ಜನ

ಮಡಿಕೇರಿ : ಸಿದ್ಧಾಪುರದ ಪಾಲಿಬೆಟ್ಟ ರಸ್ತೆಯ ವಡ್ಡರ ಕಾಡು ತೋಟಕ್ಕೆ ನುಗ್ಗಿದ ಕಾಡಾನೆ, ತೋಟವನ್ನು ಸಂಪೂರ್ಣ ಪುಡಿಗೈದಿರುವುದಲ್ಲದೇ, ಕಾರ್ಮಿಕನ ಮೇಲೆ ದಾಳಿ ನಡೆಸಿ ಆತನ ಸಾವಿಗೆ ಕಾರಣವಾಗಿದೆ. ಸಾವಿಗೀಡಾದ ಕಾರ್ಮಿಕನನ್ನು ಚೆಲುವ (42) ಎಂದು ಗುರುತಿಸಲಾಗಿದೆ.

ಕಾಫಿ ಚೀಲಗಳನ್ನು ತರಲು ಐವರು ಟ್ರಾಕ್ಟರಿನಲ್ಲಿ ತೆರಳುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ಕಾಡಾನೆ ದಿಢೀರ್ ಪ್ರತ್ಯಕ್ಷವಾದಾಗ ಚಾಲಕ ಸೇರಿದಂತೆ ಇತರರು ಓಡಲಾರಂಭಿಸಿದರು. ಆದರೆ ಕಾಡಾನೆ ದಾಳಿಗೆ ಸಿಲುಕಿಕೊಂಡ ಚೆಲುವ ಅವರ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತನ ಕುಟುಂಬಕ್ಕೆ ತುರ್ತು ಪರಿಹಾರವಾಗಿ ರೂ 2 ಲಕ್ಷದ ಚೆಕ್ಕನ್ನು ಅರಣ್ಯ ಇಲಾಖೆ ಹಸ್ತಾಂತರಿಸಿದೆ.

ಸಿದ್ದಾಪುರ ವ್ಯಾಪ್ತಿಯ ವಡ್ಡರಕಾಡು, ಬೀಟಿಕಾಡು ಸೇರಿದಂತೆ ಸುತ್ತಮುತ್ತಲ ಖಾಸಗಿ ತೋಟಗಳಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಕಾಡಾನೆಗಳನ್ನು ತಕ್ಷಣ ಕಾಡಿಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.