ಬಾವಿಗಿಳಿದ ಕೂಲಿ ಆಕ್ಸಿಜನ್ ಇಲ್ಲದೆ ಮೃತ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಬಾವಿ ಸ್ವಚ್ಚಗೊಳಿಸಲೆಂದು ಬಾವಿಗೆ ಇಳಿಸಲ್ಪಟ್ಟ  ಕೂಲಿ ಕಾರ್ಮಿಕ ಬಾಬು ಕೆ (49) ಎಂಬವರು ಆಮ್ಲಜನಕದ ಕೊರತೆಯಿಂದ  ಉಸಿರಾಟದ ತೊಂದರೆಗೆ ಸಿಲುಕಿ ಬಾವಿಯೊಳಗೆ ಬಿದ್ದು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಕೌಕ್ರಾಡಿ ಗ್ರಾಮದ ಹೊಸಮಜಲು  ಬರೆಗುಡ್ಡೆ ಎಂಬಲ್ಲಿ ಬುಧವಾರ ನಡೆದಿದೆ.

ಕೂಲಿ ಕಾರ್ಮಿಕನಾಗಿರುವ ಇವರನ್ನು ಕುರಿಯಕೋಸ್ ಯಾನೆ ಶಿಬು ಎಂಬವರು ಬಾವಿಯನ್ನು ಸ್ವಚ್ಛಗೊಳಿಸಲೆಂದು ಕರೆ ತಂದಿದ್ದರು.

ಸುಮಾರು 45 ಅಡಿಗೂ ಹೆಚ್ಚಿನ  ಆಳದ ಬಾವಿಯೊಳಗೆ ಬಾಬು ಅವರನ್ನು ಇಳಿಸಿದ್ದ ಕುರಿಯಕೋಸ್ ತಾನು ಬಾವಿಯ ಮೇಲ್ದಂಡೆಯಲ್ಲಿ  ನಿಂತು ಬಾವಿ ಕೆಸರು ತೆಗೆಯುವ ಕಾರ್ಯವನ್ನು ಪ್ರಾರಂಭಿಸಿದ್ದರು.

ಬಾವಿಗಿಳಿದಿದ್ದ ಬಾಬು ನಾಲ್ಕೈದು 5 ಕೊಡ ನೀರನ್ನು ಹೊರಚೆಲ್ಲುವಷ್ಟರಲ್ಲಿ ಆಮ್ಲಜನಕದ ಕೊರತೆಯಿಂದ ಉಸಿರಾಟ ತೊಂದರೆಗೆ ಸಿಲುಕಿ ಅಸ್ವಸ್ಥತೆಗೆ ಒಳಗಾದರು.  ಕೂಡಲೇ ಮೇಲ್ಗಡೆ ಇದ್ದ ಕುರಿಯಕೋಸ್  ಇಳಿದಿದ್ದ ಹಗ್ಗದ ಸಹಾಯದಿಂದಲೇ ಬಾಬು ರವರನ್ನು ಮೇಲಕ್ಕೆತ್ತುವ ಪ್ರಯತ್ನ ನಡೆಸಿದರಾದರೂ  ಆಮ್ಲಜನಕದ ಕೊರತೆಯಿಂದ ನಿತ್ರಾಣಕ್ಕೆ ಸಿಲುಕಿದ್ದ ಬಾಬು, ಮೇಲಕ್ಕೆತ್ತುವ ಪ್ರಯತ್ನದ ದಾರಿ ಮಧ್ಯೆ ಹಗ್ಗದ ಮೇಲಿನ ತನ್ನ ಕೈ ಯ ಹಿಡಿತವನ್ನು ಸಡಿಲಿಸಿದಕಾರಣ ಬಾವಿಗೆ ಬಿದ್ದರು. ಬೀಳುವ ವೇಳೆ ಬಾವಿಗೆ ಅಳವಡಿಸಿದ್ದ ಕಾಂಕ್ರೀಟ್ ರಿಂಗಿಗೆ ಅವರ ತಲೆ ಬಡಿದ ಕಾರಣ ಗಂಭೀರ ಗಾಯಗೊಂಡು ಬಾವಿಯೊಳಗೆ ಸಾವನ್ನಪ್ಪಿದರು.

ಬಳಿಕ ಪುತ್ತೂರು ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸಿ ಬಾಬು ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದರು. ಮೃತ ಬಾಬುರವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಆಳವಾದ ಬಾವಿಯ ಕೆಸರು ತೆಗೆಯುವ ಕಾರ್ಯಕ್ಕೆ ಇಳಿಸುವ ಮುನ್ನ ಯಾವುದೇ ಸುರಕ್ಷತಾ ಕ್ರಮ ಅನುಸರಿಸದೆ ಬಾಬು ಸಾವಿಗೆ ಕಾರಣರಾದ ಕುರಿಯಕೋಸ್ ನಿರ್ಲಕ್ಷತನದ ವಿಚಾರದಲ್ಲಿ ಉಪ್ಪಿನಂಗಡಿ ಪೆÇಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.