ಕುರಿಫಂಡ್ ವಂಚನೆ ಆರೋಪಿ ಬಂಧನ

ಬಂಧಿತ ಪುರಂದರ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಕೋಟ್ಯಂತರ ವಂಚನೆ ಆರೋಪಿ ತಲೆಮರೆಸಿಕೊಂಡಿದ್ದ ವಿಟ್ಲದ ವೈವಾಟ್ ಪುರಂದರ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.

ಕಳೆದ ಐದಾರು ವರ್ಷಗಳಿಂದ ವಿಟ್ಲದಲ್ಲಿ ಸೇರಾಜೆ ಪುರಂದರ (39) ಎಂಬಾತ ಹೋಟೆಲ್ ವ್ಯವಹಾರದ ಜೊತೆಗೆ ಲಕ್ಷಗಟ್ಟಲೆ ಮೊತ್ತದ ಕುರಿ ಫಂಡ್, ಬಡ್ಡಿ ವ್ಯವಹಾರಗಳ ಮಾಲಿಕನಾಗಿದ್ದ. 60 ಸಾವಿರದಿಂದ ಐದು ಲಕ್ಷ ಇಪ್ಪತೈದು ಸಾವಿರದ ತನಕ ವಿವಿಧ ಕುರಿ ಫಂಡ್ ನಡೆಸುತ್ತಿದ್ದ ಪುರಂದರ ಜೊತೆಗೆ ಮೂರು ಐಷಾರಾಮಿ ವಾಹನಗಳ ಮಾಲಿಕನೂ ಆಗಿದ್ದ. ಈ ಮಧ್ಯೆ ಹೋಟೆಲ್ ವ್ಯವಹಾರ, ಕುರಿಫಂಡುಗಳ ವ್ಯವಹಾರ ನೆಲಕಚ್ಚಿದ ಕಾರಣ ತಲೆಮರೆಸಿಕೊಂಡ ಪುರಂದರನನ್ನು ಹಣ ನೀಡಿದ್ದ ಅದೆಷ್ಟೋ ಜನ ಹುಡುಕಾಡುತ್ತಿದ್ದರು. ವಿಟ್ಲದ ಬೊಬ್ಬೆಕೇರಿಯಲ್ಲಿದ್ದ ಹೋಟೆಲಿನ ಸೊತ್ತುಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಸಂದರ್ಭ ಈತನಿಂದ ವಂಚನೆಗೊಳಗಾಗಿದ್ದ ಜನ ಜಮಾಯಿಸಿ ವಂಚಕ ಪುರಂದರನನ್ನು ವಿಟ್ಲ ಪೊಲೀಸರಿಗೆ ವಶಕ್ಕೆ ನೀಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೆ ವಂಚನೆಗೊಳಗಾದ ಜನ ಠಾಣೆಯ ಮುಂದೆ ಜಮಾಯಿಸಿ ಈತನ ವಿರುದ್ಧ ದೂರು ನೀಡಿದ್ದು, ಕೊನೆಗೂ ವೈವಾಟ್ ಪುರಂದರ ವಿಟ್ಲ ಪೊಲೀಸರ ಅತಿಥಿಯಾಗಿದ್ದಾನೆ.