ಬೈಕ್ ಅಪಘಾತ, ಕುಂದಾಪುರ ಕಾಲೇಜು ವಿದ್ಯಾರ್ಥಿ ಸಾವು

ಕುಂದಾಪುರ : ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಯೂನಿಟಿ ಹಾಲ್ ಮುಂಭಾಗದಲ್ಲಿ ಬೈಕೊಂದಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಬೈಕಿನ ಸಹಸವಾರ, ಕಾಲೇಜು ವಿದ್ಯಾರ್ಥಿ ಸಾವಿಗೀಡಾದ ಘಟನೆ ನಿನ್ನೆ ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಮೂಡುಬಗೆಯ ನಿವಾಸಿ ಶಂಭುಶೆಟ್ಟಿ ಎಂಬುವರ ಪುತ್ರ ಸಂದೀಪ್ ಶೆಟ್ಟಿ (19) ಎಂದು ಗುರುತಿಸಲಾಗಿದೆ. ಈತ ಬಿದ್ಕಲ್ಕಟ್ಟೆ ಐಟಿಐ ಎಂಎಂಇ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದು ಹೊಟೇಲೊಂದರಲ್ಲಿ ಪಾರ್ಟ್ ಟೈಂ ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ. ಸೋಮವಾರ ರಾತ್ರಿ ಹೊಟೇಲ್  ಕೆಲಸ ಮುಗಿಸಿ ಸ್ನೇಹಿತರಾದ ಸುಭಾಸ್ ಎಂಬುವರ ಬೈಕಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರಂತ ಘಟನೆ ಸಂಭವಿಸಿದೆ.

ಅಪಘಾತದ ಸಂದರ್ಭ ತಲೆಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಈತನನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾನೆ. ತಂದೆ ಶಿವಮೊಗ್ಗದಲ್ಲಿ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದು, ಅತ್ಯಂತ ಬಡತನದಲ್ಲಿ ಈ ಕುಟುಂಬವಿದೆ. ಸಹಪಾಠಿ ವಿದ್ಯಾರ್ಥಿ ಅಗಲುವಿಕೆ ಹಿನ್ನೆಲೆಯಲ್ಲಿ ಇತರೆ ವಿದ್ಯಾರ್ಥಿಗಳು

ಕುಂದಾಪುರ ಶವಾಗಾರದಲ್ಲಿ ಜಮಾಯಿಸಿ, ಕಂಬನಿ ಮಿಡಿದರು.