ಕುಂಭಾಸಿ ರೌಡಿ ಸುರೇಶ್ ಬೆಂಗಳೂರಿನಲ್ಲಿ ಕೊಲೆ

ಗೋಣಿಚೀಲದಲ್ಲಿ ಶವ ಪತ್ತೆ

ಸ್ನೇಹಿತನಿಂದಲೇ ಹತ್ಯೆ ಶಂಕೆ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಉಡುಪಿ ಜಿಲ್ಲೆಯಲ್ಲಿ ಪ್ರಮುಖ ರೌಡಿ ಶೀಟರ್ ಆಗಿದ್ದ ಕುಂದಾಪುರ ತಾಲೂಕಿನ ಕುಂಭಾಸಿ ಸುರೇಶ್ ಪೂಜಾರಿ ಯಾನೆ ಗೋಲ್ಡನ್ ಸುರೇಶ್ ಮಂಗಳವಾರ ತಡ ರಾತ್ರಿ ಬೆಂಗಳೂರಿನಲ್ಲಿ ಹತ್ಯೆಗೀಡಾಗಿದ್ದಾನೆ ಎಂದು ತಿಳಿದುಬಂದಿದೆ.

ಸುರೇಶ್ ಉಡುಪಿ ಜಿಲ್ಲೆಯ ವಿವಿಧ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದು, ಜೈಲಿನಿಂದ ಬಿಡುಗಡೆಯಾದ ಬಳಿಕ ಬೆಂಗಳೂರಿನ ಜಯನಗರದಲ್ಲಿ ವಾಸಿಸುತ್ತಿದ್ದ. ಆತನ ಸ್ನೇಹಿತರೊಂದಿಗೆ ಹಣಕಾಸಿನ ವ್ಯವಹಾರ ನಡೆಸುತ್ತಿದ್ದ ಎನ್ನಲಾಗಿದ್ದು, ಬಡ್ಡಿ ವ್ಯವಹಾರ ಮತ್ತು ಹಪ್ತಾ ವಸೂಲಿಯಿಂದ ಬೆಂಗಳೂರನಲ್ಲಿಯೂ ಸಾಕಷ್ಟು ಹೆಸರು ಮಾಡಿದ್ದ ಎನ್ನಲಾಗಿದೆ. ಮಂಗಳವಾರ ರಾತ್ರಿ ಸುಮಾರು 1.50ತನಕವೂ ವಾಟ್ಸಪ್ಪಿನಲ್ಲಿ ಇದ್ದು,  ವಾಟ್ಸಪ್ ವೀಕ್ಷಿಸಿದ ಕೊನೆ ಸಮಯ 1.50 ಎಂದು ತಿಳಿದುಬಂದಿದೆ.

ಬುಧವಾರ ಬೆಳಿಗ್ಗೆ ಸುರೇಶ್ ತಂದೆ ಕರೆಮಾಡಿದ್ದಾಗ ಸ್ಪಂದನೆ ಇಲ್ಲದೇ ಇದ್ದ ಕಾರಣ ಅಪಾರ್ಟ್‍ಮೆಂಟಿನ ಬಾಗಿಲು ತೆರೆದು ನೋಡಿದಾಗ ಗೋಣಿ ಚೀಲದಲ್ಲಿ ಸುರೇಶ್ ಶವ ಪತ್ತೆಯಾಗಿತ್ತು ಎನ್ನಲಾಗಿದೆ. ಸುರೇಶನ ಆತ್ಮೀಯ ಸ್ನೇಹಿತನಾಗಿದ್ದ ರಾಕಿ ಹಾಗೂ ವಿಕ್ಕಿ ಘಟನೆಯ ಬಳಿಕ ತಲೆ ಮರೆಸಿಕೊಂಡಿದ್ದು, ರಾಕೇಶಗೆ ಈ ಹಿಂದೆ ಹಣಕಾಸಿನ ವಿಚಾರದಲ್ಲಿ ಸುರೇಶನೊಂದಿಗೆ ವೈಮನಸ್ಸು ಇತ್ತೆನ್ನಲಾಗಿದೆ. .

ವಿದ್ಯಾರ್ಥಿ ಜೀವನದಲ್ಲಿಯೇ ರೌಡಿಸಂ ಮಾಡುತ್ತಾ ಬೆಳೆದಿದ್ದ ಸುರೇಶ್, ಜಿಲ್ಲೆಯಲ್ಲಿ ಹಲವು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾತ. 2008ರಲ್ಲಿ ಕುಂದಾಪುರದ ಎಸ್ಸೈ ಆಗಿದ್ದ ಸತೀಶ್ ಅವರಿಗೆ ಹಲ್ಲೆ ನಡೆಸಿದ್ದ ಆರೋಪ, 2013ರಲ್ಲಿ ಯುವತಿಯ ಅಕ್ರಮ ಸಾಗಾಟ, ಹೆಣ್ಣುಮಕ್ಕಳನ್ನು ಮಾರಾಟದ ಆರೋಪ, ಹಪ್ತಾ ವಸೂಲಿ, ಕೊಲೆ ಸುಫಾರಿ ಮೊದಲಾದ ಪ್ರಕರಣಗಳು ಗೋಲ್ಡನ್ ಸುರೇಶ್ ಮೇಲಿದ್ದವು ಎನ್ನಲಾಗಿದೆ. ಬೆಂಗಳೂರಿನಲ್ಲಿ ಬಂಗಾರದ ಒಡವೆಗಳ ಚೀಟಿಯಲ್ಲಿಯೂ ಸಾಕಷ್ಟು ವಂಚನೆ ನಡೆಸಿದ್ದ ಆರೋಪವೂ ಸುರೇಶ್ ಮೇಲಿತ್ತು.

ಹತ್ಯೆಗೀಡಾದ ಸುರೇಶ್ ಪತ್ನಿ ಮಂಗಳೂರಿನಲ್ಲಿ ನೆಲಸಿದ್ದು, ಕುಂಭಾಸಿಯಲ್ಲಿ ಆತನ ಸಹೋದರ ನೆಲೆಸಿದ್ದಾರೆ. ಸುರೇಶ್ ಸ್ನೇಹಿತರು, ಸಂಬಂಧಿಕರು ಬೆಂಗಳೂರಿಗೆ ತೆರಳಿದ್ದು, ಇಂದು ಮೃತದೇಹವನ್ನು ಕುಂಭಾಸಿಗೆ ಕೊಂಡೊಯ್ಯಲಾಗುತ್ತದೆ ಎನ್ನುವ ಮಾಹಿತಿ ಇದೆ.