ಕುಮಾರ್ ಬಂಗಾರಪ್ಪ ಶೀಘ್ರವೇ ಬಿಜೆಪಿಗೆ ?

ಕುಮಾರ ಬಂಗಾರಪ್ಪ

ಸೊರಬ (ಶಿವಮೊಗ್ಗ) : ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಮಂತ್ರಿ ಕುಮಾರ್ ಬಂಗಾರಪ್ಪ ಅವರು ಸದ್ಯದಲ್ಲೇ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಳ್ಳುವ ಸುಳಿವು ನೀಡಿದ್ದಾರೆ. ಬುಧವಾರದಂದು ಪಕ್ಷದ ಕಾರ್ಯಕರ್ತರ ಸಭೆ ಮತ್ತು ತನ್ನ ಬೆಂಬಲಿಗರ ಜೊತೆಗೆ ನಡೆದ ಸಭೆಗಳಲ್ಲಿ ಅವರು ಈ ಬಗ್ಗೆ ಇಂಗಿತ ನೀಡಿದ್ದಾರೆ.
ತನ್ನ ಮುಂದಿನ ರಾಜಕೀಯ ಭವಿಷ್ಯದ ಹೆಜ್ಜೆಯ ಬಗ್ಗೆ ಶೀಘ್ರವೇ ಘೋಷಣೆ ಮಾಡುವುದಾಗಿ ಅವರು ಹೇಳಿದ್ದಾರೆ. ಕಾರ್ಯಕರ್ತರು ಹಾಗೂ ತನ್ನ ನಿಷ್ಠಾವಂತ ಬೆಂಬಲಿಗರೊಂದಿಗೆ ತಾನು ಕಾಂಗ್ರೆಸ್ ಪಕ್ಷ ತೊರೆಯುವುದಂತೂ ಖಚಿತ ಎಂದಿದ್ದಾರೆ.

ಸಿದ್ದರಾಮಯ್ಯನವರ ಸರಕಾರದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಗೌರವವಿಲ್ಲ ಎಂದು ಆರೋಪಿಸಿರುವ ಅವರು ರಾಜ್ಯದಲ್ಲಿ ಪಕ್ಷವನ್ನು ಬಲವರ್ಧನೆ ಮಾಡುವಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಜಿ ಪರಮೇಶ್ವರ್ ಅವರು ಸೋತಿದ್ದಾರೆ ಎಂದು ಆರೋಪಿಸಿದ್ದಾರೆ.

“ಹಿರಿಯ ನಾಯಕ ಎಸ್ ಎಂ ಕೃಷ್ಣ ಮತ್ತು ಜಾಫರ್ ಶರೀಫ್ ಅವರು ಪಕ್ಷ ತೊರೆದಿದ್ದಾರೆ. ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರ ಗಮನಕ್ಕೆ ಈ ವಿಚಾರವನ್ನು ತರಲಾಗಿದ್ದರೂ ಕೂಡಾ ಯಾರೂ ಕೂಡಾ ಇದನ್ನೆಲ್ಲ ಸರಿಪಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತಿಲ್ಲ” ಎಂದು ಕುಮಾರ್ ಬಂಗಾರಪ್ಪ ದೂರಿದ್ದಾರೆ.