ನಿಜವಾದ ಹೀರೋ ಡಯಾಸರನ್ನು ತೆರೆಮರೆಗೆ ಸರಿಸಿದ ನಾಯಕರು

ಕುಡ್ಲ ಎಕ್ಸಪ್ರೆಸ್ ಕನಸು ನನಸು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕುಡ್ಲ ಎಕ್ಸಪ್ರೆಸ್ ಕನಸು ಕೊನೆಗೂ ನನಸಾಗಿದೆ. ಬಹು ನಿರೀಕ್ಷಿತ, ವಾರದಲ್ಲಿ ಮೂರು ಬಾರಿ ಸಂಚಲಿಸಲಿರುವ ಮಂಗಳೂರು-ಯಶವಂತಪುರ-ಮಂಗಳೂರು ಹಗಲು ರೈಲು ರವಿವಾರ ಸಡಗರದಿಂದ ಲೋಕಾರ್ಪಣೆಗೊಂಡಿದೆ.

ಈ ಕನಸು ನನಸಾಗಲು ಒಂದು ವಿಧದಲ್ಲಿ ಉಡುಪಿ ರೈಲು ಯಾತ್ರಿ ಸಂಘದ ಅಧ್ಯಕ್ಷ ಆರ್ ಎಲ್ ಡಯಾಸ್ ಅವರೇ ಕಾರಣರೆಂದು ಹೇಳಬಹುದು. ಪ್ರಾಯಶಃ ಅವರು ಈ ವಿಚಾರದಲ್ಲಿ ಕಾನೂನು ಹೋರಾಟ ಕೈಗೆತ್ತಿಕೊಳ್ಳದೇ ಇರುತ್ತಿದ್ದರೆ, ನೈಋತ್ಯ ರೈಲ್ವೆ ಈ ರೈಲು ಸೇವೆಯನ್ನು ಆರಂಭಿಸಲು ಮನಸ್ಸೇ ಮಾಡದಿರುವ ಎಲ್ಲಾ ಸಾಧ್ಯತೆಗಳಿದ್ದವು. ಹೈಕೋರ್ಟಿನ ಮುಂದೆ 2015ರಲ್ಲಿ ಅಪೀಲೊಂದನ್ನು ಸಲ್ಲಿಸಿದ್ದ ಡಯಾಸ್, 2014-15ನೇ ರೈಲ್ವೆ ಬಜೆಟಿನಲ್ಲಿ ಆಗಿನ ರೈಲ್ವೆ ಸಚಿವ ಡಿ ವಿ ಸದಾನಂದ ಗೌಡ ಮಾಡಿದ ಘೋಷಣೆಯಂತೆ ಈ  ರೈಲು ಸೇವೆಯನ್ನು ಆರಂಭಿಸಬೇಕೆಂದು  ಕೋರಿದ್ದರು. ಈ ಪ್ರಕರಣದ ವಿಚಾರಣೆಯಿನ್ನೂ ಬಾಕಿಯಿದೆ ಹಾಗೂ ಮುಂದಿನ ವಿಚಾರಣೆ ಎಪ್ರಿಲ್ 17ರಂದು ನಡೆಯಲಿದೆ. ಆದರೆ ಮಾರ್ಚ್ 7, 2017ರಂದು ನ್ಯಾಯಾಲಯಕ್ಕೆ ನೀಡಿದ ಮಾಹಿತಿಯಲ್ಲಿ ಮಂಗಳೂರು ಸೆಂಟ್ರಲ್ ಮತ್ತು ಯಶವಂತಪುರ ನಡುವಣ ಈ ರೈಲನ್ನು ಮಾರ್ಚ್ 31ರೊಳಗಾಗಿ ಆರಂಭಿಸುವುದಾಗಿ ನೈಋತ್ಯ ರೈಲ್ವೆ ಹೇಳಿತ್ತು.

ಈಗ ಈ ರೈಲು ಮಂಗಳೂರು ಸೆಂಟ್ರಲ್ ಬದಲು ಮಂಗಳೂರು ಜಂಕ್ಷನ್ನಿನಿಂದ ಸಂಚರಿಸಲಿದ್ದರೂ ಈ ರೈಲು ಸೇವೆ ಆರಂಭಕ್ಕೆ ಡಯಾಸ್ ಕಾರಣರು ಎಂದು ಹೇಳುವುದು ಅತಿಶಯೋಕ್ತಿಯಾಗದು. ಕುಡ್ಲ ಎಕ್ಸಪ್ರೆಸ್ ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಂದ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟನೆಗೊಂಡರೆ ಈ  ಸಂದರ್ಭ ನಿನ್ನೆ ಮಂಗಳೂರು ಜಂಕ್ಷನ್ನಿನಲ್ಲಿ ನಡೆದ ಸಮಾರಂಭದಲ್ಲಿ ಡಯಾಸ್ ಅವರೂ ಹಾಜರಿದ್ದರು. ಆದರೆ ವಿಪರ್ಯಾಸವೆಂದರೆ ಭಾಗವಹಿಸಿದ್ದ ಯಾವೊಬ್ಬ ನಾಯಕರೂ  ಅವರ ಹೆಸರನ್ನು ಉಲ್ಲೇಖಿಸಲಿಲ್ಲ. ಕೇಂದ್ರ ಸಚಿವ ಸದಾನಂದ ಗೌಡರಂತೂ ತಾವು ಮಂಡಿಸಿದ್ದ ಬಜೆಟ್ಟಿನಲ್ಲಿ ಘೋಷಿಸಿದ್ದ 26 ರೈಲುಗಳಲ್ಲಿ 24 ರೈಲು ಸೇವೆಗಳು ಆರಂಭಗೊಂಡಿವೆಯೆಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು. ಅಲ್ಲಿ ಹಾಜರಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ,  ಸಂಸದ ನಳಿನ್ ಕುಮಾರ್ ಕಟೀಲ್ ಮತ್ತಿತರರೂ ತಮ್ಮ ಭಾಷಣಗಳಲ್ಲಿ ಡಯಾಸ್ ಅವರ ಹೆಸರು ಉಲ್ಲೇಖಿಸಲಿಲ್ಲ.