ಬಸ್ಸು ನಿಲ್ದಾಣದಲ್ಲಿ ಹಗಲು ದರೋಡೆ ಪರಿಶೀಲಿಸುವೆ : ಕೆಎಸ್ಸಾರ್ಟಿಸಿ ಡೀಸಿ

ಕರಾವಳಿ ಅಲೆ  ವರದಿ

ಮಂಗಳೂರು : ಬಿಜೈ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ಮೊಬೈಲ್ ಚಾರ್ಜ್ ಮಾಡಲು ಎಸ್‍ಡಿಟಿ ಬೂತ್‍ನಲ್ಲಿ ಗಂಟೆಗೆ 10 ರೂಪಾಯಿ ವಸೂಲು ಮಾಡುವ ವ್ಯವಸ್ಥೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುವುದಾಗಿ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ತಿಳಿಸಿದ್ದಾರೆ.

ಇಲ್ಲಿನ ಎಸ್‍ಟಿಡಿ ಬೂತ್‍ನಲ್ಲಿ ಪ್ರಯಾಣಿಕರ ಮೊಬೈಲ್ ಚಾರ್ಜ್ ಮಾಡಲು ಇಟ್ಟು ದುಡ್ಡು ವಸೂಲು ಮಾಡುತ್ತಿರುವ ಬಗ್ಗೆ ಕೊಳ್ಳೇಗಾಲದ ವಿನಯಕುಮಾರ್ ಎಂಬವರು ಇಲ್ಲಿನ ಅಧಿಕಾರಿಗಳಿಗೆ ದೂರು ನೀಡಿದ್ದರು. `ಮೊಬೈಲ್ ಚಾರ್ಜ್ ಮಾಡುವ ನೆಪದಲ್ಲಿ ಹಗಲು ದರೋಡೆ ಮಾಡಲಾಗುತ್ತಿದೆ, ಇದಕ್ಕೆ ಅಧಿಕಾರಿಗಳ ಕೃಪಾಕಟಾಕ್ಷವಿದೆ’ ಎಂದು ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೀಪಕ್, “ಮಂಗಳೂರು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮೋಸವಾಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಬಂದಲ್ಲಿ ಪರಿಶೀಲಿಸುವೆ” ಎಂದಿದ್ದಾರೆ.

“ಕೆಎಸ್ಸಾರ್ಟಿಸಿ ವತಿಯಿಂದ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಅಳವಡಿಸಿಲ್ಲ.  ಇಲ್ಲಿ ಎಸ್‍ಟಿಡಿ ಬೂತ್ ನಡೆಸಲು ವಿಭಿನ್ನಚೇತನ ವ್ಯಕ್ತಿಯೊಬ್ಬರಿಗೆ ನೀಡಿದ್ದೇವೆ. ಅವರೇ ವಿದ್ಯುತ್ ಬಿಲ್ ಕಟ್ಟಬೇಕಾಗಿರುವುದರಿಂದ ಮೊಬೈಲ್ ಚಾರ್ಜ್ ಮಾಡಲು ದುಡ್ಡು ತೆಗೆದುಕೊಂಡಿರಬಹುದು. ಯಾರಾದರೂ ಉಚಿತವಾಗಿ ಮೊಬೈಲ್ ಚಾರ್ಜ್ ಮಾಡಿಕೊಡಲು ಮುಂದೆ ಬಂದಲ್ಲಿ ಅಂತಹ ಸೇವಾ ಸಂಸ್ಥೆಗಳಿಗೆ ನಾವು ವ್ಯವಸ್ಥೆ ಮಾಡಿಕೊಡುತ್ತೇವೆ”  ಎಂದು ಭರವಸೆ ಕೊಟ್ಟಿದ್ದಾರೆ.

LEAVE A REPLY