`ಕೆಎಸ್ಸಾರ್ಟಿಸಿಯಿಂದ ಜನಸ್ನೇಹಿ ಸೇವೆ’

ನಮ್ಮ ಪ್ರತಿನಿಧಿ ವರದಿ

ಸುಳ್ಯ :  ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆ ಎಸ್ ಆರ್ ಟಿ ಸಿ ಸೇವೆಯನ್ನು ಇನ್ನಷ್ಟು ಜನಸ್ನೇಹಿಯನ್ನಾಗಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಸುಳ್ಯದಲ್ಲಿ ನಿರ್ಮಾಣಗೊಂಡ ಕೆ ಎಸ್ ಆರ್ ಟಿ ಸಿ ಡಿಪೋವನ್ನು ಉದ್ಘಾಟನೆಗೊಂಡ ಬಳಿಕ ಮಾತನಾಡಿದ ಅವರು ಶಾಸಕರು, “ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಇನ್ಮುಂದೆ ಎರಡು ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ನಡೆಸಲಾಗುವುದು. ಇದರಲ್ಲಿ ಪ್ರಯಾಣಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. 3.50 ಕೋಟಿ ರೂ ವೆಚ್ಚದಲ್ಲಿ ಈ ನೂತನ ಡಿಪೋ ನಿರ್ಮಿಸಲಾಗಿದೆ.  ಬಸ್ಸು ಚಾಲಕರ ಮತ್ತು ನಿರ್ವಾಹಕರ ತರಬೇತಿ ಕೇಂದ್ರವನ್ನು ಉಡುಪಿ ಮತ್ತು ಮಂಗಳೂರಿಗೆ ಮಂಜೂರು ಮಾಡಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ 127 ಬಸ್ಸು ನಿಲ್ದಾಣಗಳು ಮತ್ತು 40 ಬಸ್ ಡಿಪೋಗಳನ್ನು ನಿರ್ಮಿಸಲಾಗಿದೆ” ಎಂದರು.

“ಕೆ ಎಸ್ ಆರ್ ಟಿ ಸಿ ಸಂಪೂರ್ಣ ಪಾರದರ್ಶಕ ಆಡಳಿತ  ವ್ಯವಸ್ಥೆಯನ್ನು ಹೊಂದಿದೆ ಎಂದ ಸಚಿವರು  36 ನಗರಗಳಲ್ಲಿ ನಗರ ಸಾರಿಗೆ ಸೇವೆ ಆರಂಭಿಸಿದೆ.  ಹಿಂದುಳಿದ ಜಾತಿ, ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗಿದೆ” ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಬಸ್ ಸಿಬ್ಬಂದಿಗಳ ವಸತಿನಿಲಯದ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿದರು. ಕೆಎಸ್ಸಾರ್ಟಿಸಿ ಅಧ್ಯಕ್ಷ  ಕೆ ಗೋಪಾಲ ಪೂಜಾರಿ ಉಪಸ್ಥಿತರಿದ್ದರು.