ಬುಕ್ಕಿಂಗ್ ಕೇಂದ್ರಗಳಿಗೆ ಸ್ವೈಪ್ ಮೆಶೀನುಗಳನ್ನು ವಿತರಿಸಿದ ಕೆಎಸ್ಸಾರ್ಟಿಸಿ

 ಬೆಂಗಳೂರು : ಕಾವೇರಿ ಹೋರಾಟದಂಗವಾಗಿ ನಡೆದ ಬಂದ್, ಇತರ ಮುಷ್ಕರಗಳಿಂದಾಗಿ ಹಾಗೂ ಇದೀಗ ನೋಟು ಅಮಾನ್ಯದಿಂದಾಗಿ ರೂ 100 ಕೋಟಿಯಷ್ಟು  ನಷ್ಟ ಅನುಭವಿಸುತ್ತಿರುವ ಕೆಎಸ್ಸಾರ್ಟಿಸಿ ಇದೀಗ  ತನ್ನ ನಷ್ಟ ಕಡಿಮೆಗೊಳಿಸುವ ನಿಟ್ಟಿನಲ್ಲಿ ಹಾಗೂ ಪ್ರಯಾಣಿಕರು ಕ್ಯಾಶ್ ಲೆಸ್ ವ್ಯವಹಾರಗಳಿಗೆ ಹೆಚ್ಚು ಒತ್ತು ನೀಡುವಂತೆ ಮಾಡುವ ಸಲುವಾಗಿ  ಸುಮಾರು 102 ಟಿಕೆಟ್ ಬುಕ್ಕಿಂಗ್ ಕೇಂದ್ರಗಳಿಗೆ ಸ್ವೈಪ್ ಮಶೀನುಗಳನ್ನು ಒದಗಿಸಿದೆ.

“ಇಲ್ಲಿಯ ತನಕ ಈ ಸೌಲಭ್ಯ ವಿಮಾನ ನಿಲ್ದಾಣ ಮತ್ತು ಕೆಲ ಪ್ರಮುಖ ಬಸ್ಸು ನಿಲ್ದಾಣಗಳಲ್ಲಿ ಮಾತ್ರ ಲಭ್ಯವಿತ್ತು” ಎಂದು ಕೆಎಸ್ಸಾರ್ಟಿಸಿ ಆಡಳಿತ ನಿರ್ದೇಶಕ ರಾಜೇಂದರ್ ಕುಮಾರ್ ಕಟಾರಿಯ ಹೇಳಿದ್ದಾರೆ.

“ನೋಟು ಅಮಾನ್ಯಗೊಳಿಸಿದಂದಿನಿಂದ ಕೆಎಸ್ಸಾರ್ಟಿಸಿ ರೂ 15 ಕೋಟಿಯಿಂದ ರೂ 20 ಕೋಟಿಯಷ್ಟು ನಷ್ಟ ಅನುಭವಿಸಿದೆ. ಕೆಲ ದಿನಗಳ ತನಕ ಅಮಾನ್ಯಗೊಂಡ ನೋಟುಗಳನ್ನು ಬಸ್ಸುಗಳಲ್ಲಿ ಪ್ರಯಾಣಿಕರಿಂದ ಪಡೆಯಲಾಗುತ್ತಿತ್ತಾದ್ದರೂ ಕಂಡೆಕ್ಟರುಗಳು ಚೇಂಜ್ ನೀಡುವಲ್ಲಿ ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಸ್ವೈಪ್ ಮೆಶೀನುಗಳು ದೂರ ಮಾಡುವವು ಎಂಬ ನಂಬಿಕೆಯಿದೆ” ಎಂದು ರಾಜೇಂದರ್ ಹೇಳಿದ್ದಾರೆ.

ಆದರೆ ಇಲ್ಲಿ ಗಮನಿಸತಕ್ಕ ಅಂಶವೆಂದರೆ ನೋಟು ಅಮಾನ್ಯಗೊಂಡಂದಿನಿಂದ ಕೆಎಸ್ಸಾರ್ಟಿಸಿಯ ಆನಲೈನ್ ಬುಕ್ಕಿಂಗ್ ಸೌಲಭ್ಯದ ಪ್ರಯೋಜನ ಪಡೆಯುವವರೂ ಕಡಿಮೆಯಾಗಿದ್ದಾರೆ. ಆದರೆ ಇದೀಗ ಆನಲೈನ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಮತ್ತೆ ಹಲವರು ಉಪಯೋಗಿಸಲಾರಂಭಿಸಿದ್ದರೆ. “ಸುಮಾರು 25,000 ಸೀಟುಗಳನ್ನು ಕೆಎಸ್ಸಾರ್ಟಿಸಿ ಆನಲೈನ್ ವ್ಯವಸ್ಥೆಯ ಮುಖಾಂತರ ನೀಡುತ್ತಿದೆ” ಎಂದು ರಾಜೇಂದರ್ ವಿವರಿಸಿದ್ದಾರೆ.