ಕಾಳಸಂತೆ ಪಾಲಾಗುತ್ತಿರುವ ಕ್ಷೀರ ಭಾಗ್ಯ ಯೋಜನೆಯ ಹಾಲಿನಪುಡಿ

ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ

ನಮ್ಮ ಪ್ರತಿನಿಧಿ ವರದಿ

ಕುಮಟಾ : ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಪೂರೈಕೆಯಾಗುವ ಹಾಲಿನಪುಡಿ ಶಿಕ್ಷಣ ಇಲಾಖೆಯ ಕಣ್ಗಾವಲಲ್ಲಿ ಕಾಳಸಂತೆಯ ಪಾಲಾಗುತ್ತಿದೆಯೇ ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ಮೂಡಿದ್ದು, ಈ ಸಂಬಂಧ ಭಾರೀ ಚರ್ಚೆಗೆ ಕಾರಣವಾಗಿದೆ.

ತಾಲೂಕಿನ ಶಾಲೆಗಳಿಗೆ ಆಹಾರ ಪದಾರ್ಥಗಳನ್ನು ಪೂರೈಸುವ ಗುತ್ತಿಗೆದಾರನೇ ಪಟ್ಟಣದ ರಥಬೀದಿಯ ಕಿರಾಣಿ ಅಂಗಡಿಗೆ ಹಾಲಿನಪೌಡರ್ ಮಾರಾಟ ಮಾಡಲು ಹೋಗಿ, ಸ್ಥಳೀಯರ ಕೈಗೆ ಸಿಕ್ಕಿಬಿದ್ದು, ಮಾನ ಕಳೆದುಕೊಂಡಿದ್ದಾನೆ. ಬಾಡದ ಗ್ರಾ ಪಂ ಕಚೇರಿ ಸಮೀಪದ ನಿವಾಸಿ ಆರ್ ಬಿ ನಾಯ್ಕ ಎಂಬುವವರು ಹಾಲಿನಪುಡಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಆರೋಪ ಎದುರಿಸುತ್ತಿರುವ ಗುತ್ತಿಗೆದಾರನಾಗಿದ್ದಾನೆ.

ಈತ ಪಟ್ಟಣದ ರಥಬೀದಿಯಲ್ಲಿರುವ ಜಿ ಎಸ್ ಶಾನಭಾಗ ಕಿರಾಣಿ ಅಂಗಡಿಗೆ ಸುಮಾರು 15 ಕೇಜಿ ಹಾಲಿನಪುಡಿಯನ್ನು ಮಾರಾಟ ಮಾಡಲು ಆಗಮಿಸಿದ್ದರು. ಇದನ್ನು ಗಮನಿಸಿದ ಸ್ಥಳೀಯರಾದ ರಾಮಾ ನಾಯ್ಕ ಹಾಗೂ ಅವರ ಸ್ನೇಹಿತರು ಆರ್ ಬಿ ನಾಯ್ಕ ಅವರನ್ನು ತಡೆದು, ಹಾಲಿನಪುಡಿಯನ್ನು ಎಲ್ಲಿಂದ ತಂದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕಂಗಾಲಾದ ಅವರು ಮೊದಲು ಕ್ಷಮೆ ಕೇಳಿದ್ದಾರೆ. ಆದರೆ ಈ ಅಕ್ರಮ ವ್ಯವಹಾರ ಕ್ಷಮಿಸುವಂಥದಲ್ಲ ಎಂದಾಗ ಅವನ ದ್ವಿಚಕ್ರ ವಾಹನದಲ್ಲಿದ್ದ ಹಾಲಿನಪುಡಿಯ ಪ್ಯಾಕೆಟನ್ನು ನಿಧಾನವಾಗಿ ಅಂಗಡಿಯ ಮುಂಗಟ್ಟಿನಲ್ಲಿಟ್ಟು, ನಾನೇನು ತಂದಿಲ್ಲ ಎಂದು ವಾದಿಸತೊಡಗಿದ್ದಾನೆ. ನಂತರ ಅಲ್ಲಿಂದ ಕ್ಷಣಾರ್ಧದಲ್ಲಿ ತನ್ನ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ಆದರೆ ಗುತ್ತಿಗೆದಾರ ಆರ್ ಬಿ ನಾಯ್ಕ ಸ್ಥಳೀಯರ ಕೈಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದಿರುವುದು ಮತ್ತು ತನ್ನ ದ್ವಿಚಕ್ರ ವಾಹನದಲ್ಲಿ ತಂದ ಹಾಲಿನಪೌಡರ ಪ್ಯಾಕೇಟನ್ನು ಅಂಗಡಿಯ ಮುಂಗಟ್ಟಿನ ಮೇಲಿಟ್ಟಿರುವ ಸಂಪೂರ್ಣ ವಿಡಿಯೋ ಚಿತ್ರಣದ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಬಾರೀ ಸುದ್ದಿ ಮಾಡಿದೆ.

ಇಷ್ಟೆಲ್ಲ ಆದರೂ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಆ ಗುತ್ತಿಗೆದಾರನ ವಿರುದ್ಧ ದೂರು ದಾಖಲಿಸಲು ಮತ್ತು ಕಾನೂನು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಬಹಳ ಸೋಜಿಗವೆನಿಸಿತ್ತು. ಮೊದಲು ಸ್ಥಳಕ್ಕಾಗಮಿಸಿದ ಆಹಾರ ನಿರೀಕ್ಷಕ ಆರ್ ಡಿ ನಾಯ್ಕ ಅವರು ಪಂಚನಾಮೆ ಮಾಡಿ, ಪೆÇಲೀಸರಿಗೆ ಒಪ್ಪಿಸುವ ಬದಲು ತಹಶೀಲ್ದಾರರನ್ನು ಕರೆತರುವುದಾಗಿ ಹೇಳಿ ಅಲ್ಲಿಂದ ನಾಪತ್ತೆಯಾದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ ಅವರು ಅಕ್ಷರ ದಾಸೋಹ ಅಧಿಕಾರಿಗಳಿಗೆ ಸಂಬಂಧಿಸಿರುವ ವಿಷಯ ಎಂದು ಯಾವುದೇ ಕ್ರಮ ಕೈಗೊಳ್ಳದೆ ನುಣುಚಿಕೊಂಡರು.

ದೂರು ದಾಖಲಾಗದ ಹೊರತು ನಾವೇನು ಮಾಡಲಾಗದೆಂದು ಪೆÇಲೀಸರು ಅಧಿಕಾರಿಗಳು ಕೈ ಚೆಲ್ಲಿದ್ದರು. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೇಲೆ ಕಾಟಾಚಾರಕ್ಕಾಗಿ ಬೆಳಗ್ಗೆಯಾದ ಪ್ರಕರಣಕ್ಕೆ ಅಧಿಕಾರಿಗಳು ಸಂಜೆ ಹೊತ್ತಿಗೆ ಅಂತೂ ದೂರು ದಾಖಲಿಸುವುದಾಗಿ ತಿಳಿಸಿದರು. ನಂತರ ಸ್ಥಳಕ್ಕಾಗಮಿಸಿದ ಪೆÇಲೀಸರು ಹಾಲಿನಪೌಡರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು, ಆರೋಪಿತ ಆರ್ ಬಿ ನಾಯ್ಕ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.

ಶಾಲೆಗಳಿಗೆ ಸಂಬಂಧಿಸಿದ ಆಹಾರ ಪದಾರ್ಥಗಳು ಕಾಳಸಂತೆಯ ಪಾಲಾಗುತ್ತಿರುವುದನ್ನು ಸ್ಥಳೀಯರು ಅಧಿಕಾರಿಗಳಿಗೆ ಸಾಕ್ಷಿ ಸಮೇತ ಹಿಡಿದುಕೊಟ್ಟರೂ ಕ್ರಮ ಕೈಗೊಳ್ಳುವದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಿಂದೇಟಾಗುತ್ತಿರುವುದನ್ನು ಗಮನಿಸಿದರೆ ಈ ಅಧಿಕಾರಿಗಳ ಜುಟ್ಟು ಗುತ್ತಿಗೆದಾರನ ಕೈಲಿದೆ ಎಂಬ ಮಾತುಗಳು ಸ್ಥಳೀಯರಿಂದ ಕೇಳಿಬಂತು.