ನವೀಕೃತ ಬಾಲವನ ಉದ್ಘಾಟನೆಯಲ್ಲಿ ತಂದೆ ನೆನಪುಗಳನ್ನು ಹಂಚಿಕೊಂಡ ಕ್ಷಮಾ ರಾವ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಶಿವರಾಮ ಕಾರಂತರ ಪುತ್ತೂರಿನ ಮನೆ ಬಾಲವನ ನವೀಕೃತ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಕಾರಂತರ ಪುತ್ರಿ ಮತ್ತು ಒಡಿಸ್ಸಾ ಡ್ಯಾನ್ಸ್ ನಿರೂಪಕಿ ಕ್ಷಮಾ ರಾವ್ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

“ಮನೆ ಪುನರ್ ನವೀಕರಣದ ಸಂದರ್ಭ ಮನೆಯ ಮೂಲ ವಿನ್ಯಾಸಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮಾತ್ರವಲ್ಲ ನವೀಕರಣದ ಸಂದರ್ಭ ಕಾರಂತರ ದೃಷ್ಟಿಕೋನಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸಗಳನ್ನು ಮಾಡಲಾಗಿದೆ. ಕಾರಂತರು ಬೆಳೆಸಿದ ಸಸ್ಯವಿಜ್ಞಾನ ಗಾರ್ಡನನ್ನು ಕೂಡ ಸಂರಕ್ಷಿಸಲಾಗಿದೆ” ಎಂದು ಕ್ಷಮಾ ರಾವ್ ಹೇಳಿದ್ದಾರೆ.

“ಬಾಲವನವು ನನ್ನ ತಂದೆಯವರ ಕನಸಿನ ಕೂಸು, ಇದನ್ನು ಮಕ್ಕಳಿಗೆ ಆಟದ ಮಾಧ್ಯಮದ ಮೂಲಕ ಶಿಕ್ಷಣ  ನೀಡುವುದಕ್ಕಾಗಿ 1930ರಲ್ಲಿ ಪ್ರಾರಂಭಿಸಲಾಗಿತ್ತು. ಅವರು ಜಾಗವನ್ನು ಗುತ್ತಿಗೆಗೆ ಪಡೆದು ಬಾಲವನ ನಿರ್ಮಿಸಿದ್ದು, ನಂತರ ಅದಕ್ಕೆ ಉಪಕರಣಗಳನ್ನು ತಂದಿಟ್ಟಿದ್ದಾರೆ. ಆದರೆ ಕೆಲವು ಹೆತ್ತವರು ಮಕ್ಕಳನ್ನು ಬಾಲವನಕ್ಕೆ ಕಳುಹಿಸಲು ಹಿಂಜರಿಯುತ್ತಿದ್ದರು. ಹಾಗಾಗಿ ಅವರು ಬಾಲವನದಲ್ಲಿ ಅನಾಥ ಮಕ್ಕಳಿಗೆ ಶಿಕ್ಷಣ ಮತ್ತು ಆಹಾರ ಒದಗಿಸುತ್ತಿದ್ದರು. 1938ರಲ್ಲಿ ಹಣಕಾಸಿನ ಕೊರತೆಯಿಂದ ಬಾಲವನ ಮುಚ್ಚಲ್ಪಟ್ಟಿತು” ಎಂದು ಕ್ಷಮಾ ಹೇಳಿದ್ದಾರೆ.

ಬಾಲ್ಯದಲ್ಲಿ ನಾನು ತನ್ನ ಒಡಹುಟ್ಟಿದವರಾದ ಮಾಳವಿಕ, ಹರ್ಷ ಮತ್ತು ಉಲ್ಲಾಸ್ ಜೊತೆ ಬಾಲವನದಲ್ಲಿ ಆಡಿ ಬೆಳೆದ ದಿನಗಳನ್ನು ನೆನಪಿಸಿಕೊಂಡರು. ಸಸ್ಯ, ಪ್ರಾಣಿಗಳು ಮತ್ತು ಹಕ್ಕಿಗಳ ಪೋಷಣೆಗೆ ಕಾರಂತರು ನೀಡುತ್ತಿದ್ದ ಪ್ರೋತ್ಸಾಹವನ್ನು ಕೂಡ ಕ್ಷಮಾ ರಾವ್ ನೆನಪಿಸಿಕೊಂಡರು.