ವರದಿಗಾರರ ಮೇಲೆ ಉಡುಪಿ ಕೃಷ್ಣ ಮಂದಿರದ ಸ್ವಯಂಸೇವಕನಿಂದ ಹಲ್ಲೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ವರದಿಯ ಚಿತ್ರೀಕರಣಕ್ಕೆ ತೆರಳಿದ್ದ ಪತ್ರಕರ್ತರ ಮೇಲೆ ಕೃಷ್ಣ ಮಠದಲ್ಲಿ ಸ್ವಯಂಸೇವಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ವಾಸು ಎಂಬಾತ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾನೆ. ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಸ್ಥಳದಲ್ಲಿ ಈ ಘಟನೆ ನಡೆದಿದೆ. ವಾಸು ವರ್ತನೆ, ಹಲ್ಲೆಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಖಂಡಿಸಿದೆ.

ಮೊಗವೀರ ಸಂಘಟನೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಸ್ವಯಂಸೇವಕನಾಗಿ ಗುರುತಿಸಿಕೊಂಡಿರುವ ಈತ ಗುರುವಾರದಂದು ಶ್ರೀ ಕೃಷ್ಣ ಮಠದ ಬ್ರಹ್ಮಕಲಶೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ಭೋಜನ ಕೂಟದ ವೇಳೆ ಸ್ವಯಂಸೇವಕನಾಗಿದ್ದ. ದೃಶ್ಯ ಮಾಧ್ಯಮದ ಪತ್ರಕರ್ತರು ಚಿತ್ರೀಕರಣದಲ್ಲಿ ತೊಡಗಿಕೊಳ್ಳಲು ಮುಂದಾದ ವೇಳೆ ಆಕ್ರೋಶಗೊಂಡ ವಾಸು ಅವಾಚ್ಯವಾಗಿ ನಿಂದಿಸಿದ್ದಾನೆ. ಅಲ್ಲದೆ ಮಹಿಳಾ ಪತ್ರಕರ್ತೆಯರು ಇದ್ದರೂ ಅವರ ಎದುರಲ್ಲೇ ಅಶ್ಲೀಲ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾನೆ.

ಮಾಧ್ಯಮದವರ ಮೇಲೆಯೇ ಧಾರ್ಮಿಕ ಕ್ಷೇತ್ರದಲ್ಲಿ ಗೂಂಡಾಗಿರಿ ವರ್ತನೆ ಪ್ರದರ್ಶಿಸಿದ ವಾಸು ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.