ಎಪ್ರಿಲ್ 11ರಂದು ಕರಾವಳಿ ಪ್ರೀಮಿಯರ್ ಲೀಗ್ ಆರಂಭ

ಮಂಗಳೂರು : ಕರಾವಳಿಯ ಕ್ರಿಕೆಟ್ ಕಲಿಗಳು ನೆಹರೂ ಮೈದಾನದಲ್ಲಿ ಸೆಣಸಲಿರುವ ಐದು ದಿನಗಳ ಕರಾವಳಿ ಪ್ರೀಮಿಯರ್ ಲೀಗ್ ಪಂದ್ಯಾವಳಿ ಎಪ್ರಿಲ್ 11 ರಿಂದ ಆರಂಭವಾಗಲಿದೆ.

ಪಂದ್ಯಾವಳಿ ನಡೆಯಲಿರುವ ನೆಹರೂ ಮೈದಾನವನ್ನು ಎಪ್ರಿಲ್ 4 ರಿಂದ 6 ರವರೆಗೆ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಕ್ಕೆ ಕಾಯ್ದಿರಿಸಲಾಗಿರುವುದರಿಂದ ಪಂದ್ಯಾವಳಿಯನ್ನು ಎಪ್ರಿಲ್ 11 ಕ್ಕೆ ಮುಂದೂಡಲಾಗಿದೆ ಎಂದು ಪಂದ್ಯಾವಳಿಯ ಮುಖ್ಯ ಸಂಚಾಲಕ ಇಮ್ತಿಯಾಜ್ ಸೋಮವಾರ ಹೇಳಿದ್ದಾರೆ.

ಪಂದ್ಯಾವಳಿ ಸಂಘಟಕರು ಪಾರಿತೋಷಕ ಬಿಡುಗಡೆಯ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿದ್ದು, ಎಪ್ರಿಲ್ 4ರಂದು ಪಾಂಡೇಶ್ವರದ ಫೋರಮ್ ಫಿಜ್ಜಾ ಮಾಲ್ ಆವರಣದಲ್ಲಿ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಚಿವರು, ಸಂಸದರು, ಶಾಸಕರ ಉಪಸ್ಥಿತಿಯಲ್ಲಿ ಶ್ರೀದೇವಿ ಎಜ್ಯುಕೇಷನಲ್ ಟ್ರಸ್ಟ್ ಅಧ್ಯಕ್ಷ ಎ ಸದಾನಂದ ಶೆಟ್ಟಿ ಟ್ರೋಪಿಯನ್ನು ಪ್ರದಾನ ಮಾಡಲಿದ್ದಾರೆ.

ಆಟಗಾರರ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, 8 ತಂಡಗಳು ಆಟದ ಕಣಕ್ಕಿಳಿಯಲಿವೆ. ಪಂದ್ಯಾವಳಿಯಲ್ಲಿ ಪ್ರತಿ ತಂಡ ಮೂರು ಆಟಗಳನ್ನು ಆಡಲಿವೆ.

ಪ್ರತಿ ಗುಂಪಿನ ಟಾಪ್ ಟೀಮ್ ಸೆಮಿಫೈನಲಿಗೆ ನೇರ ಪ್ರವೇಶ ಪಡೆಯಲಿದೆ. ವಿಜೇತರು ಆಕರ್ಷಕ ಟ್ರೋಫಿ ಮತ್ತು 2 ಲಕ್ಷ ನಗದು ಬಹುಮಾನ ಮತ್ತು ರನ್ನರಪ್ ಟ್ರೋಫಿ ಮತ್ತು 1 ಲಕ್ಷ ನಗದು ಬಹುಮಾನ ಪಡೆಯಲಿದ್ದಾರೆ ಎಂದು ಇಮ್ತಿಯಾಜ್ ವಿವರಿಸಿದ್ದಾರೆ.