ಚುನಾವಣಾ ತಂತ್ರ ರೂಪಿಸಲು ಕಾಂಗ್ರೆಸ್ಸಿಗÀರಿಗೆ ಬಿಕೆಸಿ ಕರೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಮುಂದಿನ ಚುನಾವಣೆಯ ಗೆಲುವಿಗಾಗಿ ಈಗಿಂದಿಗಲೇ ಕಾಂಗ್ರೆಸ್ ಕಾರ್ಯತಂತ್ರ ರೂಪಿಸಬೇಕು. ಮನೆ ಮನೆಗೆ ಭೇಟಿ ನೀಡುವ ಕೆಲಸ ಪ್ರಾರಂಭಿಸಬೇಕು. ಜನರು ಏನನ್ನು ನಿರೀಕ್ಷೆ ಮಾಡುತ್ತಿದ್ದಾರೆ ಎಂದು ಮನಗಾಣಬೇಕು. ಪಕ್ಷ ಈಗಲೇ ಕೆಲಸ ಮಾಡಿದರೆ ಗೆಲುವು ಕಷ್ಟಸಾಧ್ಯವೇನಲ್ಲ” ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ ಕೆ ಚಂದ್ರಶೇಖರ್ ಹೇಳಿದರು.

ಪಕ್ಷದ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ನಾಲ್ಕು ದಶಕಗಳ ಕಾಲ ಪಕ್ಷದಲ್ಲಿದ್ದ ಹಿರಿಯ ರಾಜಕೀಯ ನಾಯಕರೊಬ್ಬರು ಹಿಂದೆ ಯಾವ ಪಕ್ಷವನ್ನು ದೂರಿದ್ದರೋ ಇದೀಗ ಅದೇ ಪಕ್ಷವನ್ನು ಸೇರಿರುವುದು ಅವರಿಗೆ ಶೋಭೆ ತರುವ ವಿಚಾರ ಅಲ್ಲ ಎಂದು ಮಾಜಿ ಸೀಎಂ ಕೃಷ್ಣರನ್ನು ಪರೋಕ್ಷವಾಗಿ ಉಲ್ಲೇಖಿಸಿ ಹೇಳಿದರು.

“ಶ್ರೀನಿವಾಸ ಪ್ರಸಾದ್ ಕುಡಾ ಪಕ್ಷ ತ್ಯಜಿಸಿ ಬಿಜೆಪಿ ಸೇರ್ಪಡೆಗೊಂಡು ಉಪಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ಇವರೆಲ್ಲರದ್ದೂ ಸ್ವಾರ್ಥ ರಾಜಕಾರಣ. ಪಕ್ಷದಲ್ಲಿ ಭಿನ್ನಾಭಿಪ್ರಾಯವಿದ್ದರೆ ಬಗೆಹರಿಸಿಕೊಳ್ಳಬೇಕು. ಅಥವಾ ಪಕ್ಷದ ಸಭೆಯಲ್ಲೇ ಆ ಬಗ್ಗೆ ಪ್ರಸ್ತಾಪಿಸಬೇಕಾಗಿತ್ತು” ಎಂದು ಹೇಳಿದರು.