ಸೆಕ್ಸ್ ಹಗರಣದಲ್ಲಿ ಕೊಟ್ಟೂರೇಶ್ವರ ಸ್ವಾಮಿ

ವೀಡಿಯೋ ವೈರಲ್

 ಕೊಪ್ಪಳ : ಕಲ್ಮಥ ಮಠದ ಕೊಟ್ಟೂರೇಶ್ವರ ಸ್ವಾಮಿ ಸೆಕ್ಸ್ ಹಗರಣವೊಂದರಲ್ಲಿ ಸಿಲುಕಿದ್ದಾರೆ. ಅವರು ಮಹಿಳೆಯೊಬ್ಬಳ ಸಂಗದಲ್ಲಿರುವ ವೀಡಿಯೋವೊಂದು ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ  ಸಾರ್ವಜನಿಕರು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿರುವ ಮಠದ ಎದುರು ಪ್ರತಿಭಟನೆ  ನಡೆಸಿ 56 ವರ್ಷದ ಸ್ವಾಮಿಯನ್ನು ಪೀಠದಿಂದ ಕೆಳಗಿಳಿಸುವಂತೆ ಆಗ್ರಹಿಸಿದ್ದಾರೆ. ಆದರೆ ಸ್ವಾಮಿ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳು ಸುಳ್ಳು, ಅವರ ಮಾನಹಾನಿಗೈಯ್ಯುವ ದುರುದ್ದೇಶದಿಮದ ಹೀಗೆ ಮಾಡಲಾಗಿದೆ ಎಂದು ಮಠದ ಕೆಲವು ಅನುಯಾಯಿಗಳು ಹೇಳುತ್ತಿದ್ದಾರೆ.

ಈ ಲಿಂಗಾಯತ ಮಠ 400 ವರ್ಷಗಳಷ್ಟು ಹಳೆಯದಾಗಿದ್ದು  ಕೊಟ್ಟೂರೇಶ್ವರ ಸ್ವಾಮಿ 1995ರಲ್ಲಿ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಸ್ವಾಮಿಯ ಮಾಜಿ ಚಾಲಕ ಮಲ್ಲಯ್ಯ ಹೇರೂರು ಎಂಬಾತ ಈ ವೀಡಿಯೋ ಚಿತ್ರೀಕರಿಸಿದ್ದಾನೆನ್ನಲಾಗಿದ್ದು ತಾನು ಸ್ವಾಮಿಗೆ ಕಳೆದೊಂದು ದಶಕದಿಂದ ಮಹಿಳೆಯರನ್ನು `ಸರಬರಾಜು’ ಮಾಡುತ್ತಿದ್ದುದಾಗಿಯೂ ಆತ ಮಾಧ್ಯಮಕ್ಕೆ ತಿಳಿಸಿದ್ದಾನೆ. ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆ ಮಠದಲ್ಲಿ 2010ರಿಂದ ಅಡುಗೆಯಾಳಾಗಿ ಕೆಲಸ ಮಾಡುತ್ತಿದ್ದಾಳೆಂದು ಹೇಳಲಾಗಿದೆ.

ವೀಡಿಯೋ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಸ್ವಾಮಿ ತನ್ನನ್ನು ಕೊಲೆಗೈಯ್ಯುವ ಬೆದರಿಕೆಯೊಡ್ಡಿದ್ದಾರೆಂದು ಮಲ್ಲಯ್ಯ ಪೊಲೀಸ್ ದೂರು ನೀಡಿದ್ದಾನಲ್ಲದೆ ವೀಡಿಯೋ ಬಹಿರಂಗಗೊಂಡಿದ್ದಕ್ಕೂ ತನಗೂ ಸಂಬಂಧವಿಲ್ಲವೆಂದು ಹೇಳಿಕೊಂಡಿದ್ದಾನೆ.

ಸ್ವಾಮಿಯ ವಿರುದ್ಧ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಯಾವುದೇ ದೂರು ದಾಖಲಾಗಿಲ್ಲ ಎಂದು ಕೊಪ್ಪಳ  ಎಸ್ಸೈ ಉದಯ ರವಿ ಹೇಳಿದ್ದಾರೆ. ಸ್ವಾಮಿಯನ್ನು ಪೀಠದಿಂದ ಕೆಳಗಿಳಿಸಲು ನಿರ್ಧರಿಸಲಾಗಿದೆ ಎಂದು ಮಠದ ಟ್ರಸ್ಟಿಗಳಲ್ಲೊಬ್ಬರಾದ ಅಶೋಕ್ ಎಂಬವರು ಹೇಳಿದ್ದಾರೆ.

 

 

LEAVE A REPLY