ಬಿಜೆಪಿ ಪ್ರಚಾರ ಬ್ಯಾನರÀಲ್ಲಿ ಕೋಟಿ-ಚೆನ್ನಯರ ಚಿತ್ರ !

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಪುತ್ತೂರಿನಲ್ಲಿ ಗುರುವಾರ ನಡೆದ ಬಿಜೆಪಿ ಸಮಾವೇಶದ ಬ್ಯಾನರಿನಲ್ಲಿ ದ ಕ ಜಿಲ್ಲೆಯ ಅವಳಿ ವೀರರಾದ ಮತ್ತು ಸರ್ವ ಧರ್ಮದವರೂ ಗೌರವಿಸಲ್ಪಡುವ ಕೋಟಿ ಚೆನ್ನಯರ ಫೋಟೋವನ್ನು ಹಾಕಲಾಗಿದ್ದು, ಇದು ಬಿಲ್ಲವ ಸಮುದಾಯ ಮಾತ್ರವಲ್ಲದೆ ಎಲ್ಲರಿಂದಲೂ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಕೆಲವು ತಿಂಗಳ ಹಿಂದೆ ದೇಹಿ ಬೈದೆತಿ ಪ್ರತಿಮೆಗೆ ಭಿನ್ನಕೋಮಿನ ಯುವಕನೊಬ್ಬ ಅವಮಾನ ಮಾಡಿದ ಪ್ರಕರಣವನ್ನು ರಾಜಕೀಯವಾಗಿ ಬಳಕೆ ಮಾಡಿಕೊಂಡ ಬಿಜೆಪಿ ಪುತ್ತೂರಿನಿಂದ ಪಟ್ಟೆತನಕ ಕಾಲ್ನಡಿಗೆ ಜಾಥಾ ನಡೆಸಿತ್ತು. ಆ ವೇಳೆ ಬಿಜೆಪಿಗರ ರಥ ಯಾತ್ರೆಗೆ ಅವಳಿ ಪರುಷರಾದ ಕೋಟಿ ಚೆನ್ನಯರ ಭಾವ ಚಿತ್ರವನ್ನು ಬಳಸಿತ್ತು. ಇದು ಆ ವೇಳೆ ಟೀಕೆಗೆ ಗುರಿಯಾಗಿತ್ತು. ಆದರೆ ಅದು ಅಷ್ಟೊಂದು ಗಂಭೀರತೆಯನ್ನು ಪಡೆದುಕೊಂಡಿರಲಿಲ್ಲ. ಆ ಬಳಿಕ ಜನವರಿ 11ರಂದು ಪುತ್ತೂರಿನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮತ್ತೆ ಕೋಟಿ ಚೆನ್ನಯರ ಭಾವಚಿತ್ರವನ್ನು ಬಳಸಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ, ಯಡ್ಯೂರಪ್ಪ ಫೋಟೋದ ಬಳಿಯೇ ಅವಳಿ ವೀರ ಪುರುಷರ ಚಿತ್ರ ಹಾಕಲಾಗಿದೆ.

ಶುಕ್ರವಾರದಂದು ಮಾಧ್ಯಮಗಳಲ್ಲಿ ಕಾರ್ಯಕ್ರಮದ ವರದಿ ಪ್ರಕಟವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬಿಲ್ಲವ ಮುಖಂಡರು ಕೋಟಿ ಚೆನ್ನಯರ ಭಾವಚಿತ್ರವನ್ನು ಹಾಕಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಯಾವುದೇ ರಾಜಕೀಯ ಪಕ್ಷದವರೂ ಕೋಟಿ ಚೆನ್ನಯರನ್ನು ರಾಜಕೀಯಕ್ಕೆ ಬಳಕೆ ಮಾಡಬಾರದು, ಅವರು ಸರ್ವ ಧರ್ಮಿಯರೂ ಗೌರವಿಸಲ್ಪಡುವ ವೀರ ಪುರುಷರಾಗಿದ್ದಾರೆ. ಫೋಟೋ ಹಾಕಿದವರು ಅದನ್ನು ತೆಗೆಯಬೇಕು” ಎಂದು ಎಚ್ಚರಿಕೆ ನೀಡಿದ್ದಾರೆ.

“ಕೋಟಿ ಚೆನ್ನಯರ ಫೋಟೋವನ್ನು ಬಿಜೆಪಿ ತನ್ನ ಕಾರ್ಯಕ್ರಮದ ಬ್ಯಾನರಿನಲ್ಲಿ ಹಾಕುವ ಮೂಲಕ ರಾಜಕೀಯ ಮಾಡಲು ಮತ್ತು ಬಿಲ್ಲವರನ್ನು ಸಂತೋಷಪಡಿಸಲು ಮುಂದಾಗಿರುವುದು ಅಕ್ಷಮ್ಯ ಅಪರಾಧವಾಗಿದೆ. ಪಡುಮಲೆಯಲ್ಲಿರುವ ಕೋಟಿ ಚೆನ್ನಯ ಕ್ಷೇತ್ರ ಸೇರಿದಂತೆ ಇತರೆ ಕಡೆಗಳಲ್ಲಿರುವ ಕೋಟಿ ಚೆನ್ನಯರ ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಸರಕಾರ ಅನುದಾನವನ್ನು ಬಿಡುಗಡೆ ಮಾಡಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಈ ಕ್ಷೇತ್ರಗಳನ್ನು ಕಡೆಗಣಿಸಿತ್ತು. ಕಾಂಗ್ರೆಸ್ ಸರಕರ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಕೋಟ್ಯಂತರ ರೂ ಅನುದಾನವನ್ನು ಬಿಡುಗಡೆ ಮಾಡಿದೆ. ಇದರಿಂದ ವಿಚಲಿತರಾದ ಬಿಜೆಪಿಗರು ತಾವು ಕೋಟಿ ಚೆನ್ನಯರನ್ನು ಮರೆತಿಲ್ಲ ಎಂಬುದನ್ನು ತೋರಿಸುವ ಮೂಲಕ ಸಮುದಾಯಕ್ಕೆ ವಂಚನೆ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಕೋಟಿ ಚೆನ್ನಯರು ರಾಜಕೀಯ ವಸ್ತುವಾಗಬಾರದು. ಅವರನ್ನು ಎಲ್ಲರೂ ಆರಾಧಿಸುವ ಶಕ್ತಿಯಾಗಿಯೇ ಕಾಣುವಂತಾಗಬೇಕು” ಎಂದು ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದ್ದಾರೆ.

ಸಾಮಾಜಿಕ ತಾಣದಲ್ಲಿ ಬಿಜೆಪಿ ಕೃತ್ಯದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಬಿಲ್ಲವ ಸಮುದಾಯಕ್ಕೆ ಏನೂ ಕೊಡುಗೆ ನೀಡದ ಬಿಜೆಪಿ ಇದೀಗ ಅವಳಿ ವೀರ ಪುರುಷರ ಫೋಟೋವನ್ನು ಪಕ್ಷದ ಪ್ರಚಾರಕ್ಕಾಗಿ ಬಳಕೆ ಮಾಡಿ ಬಿಲ್ಲವ ಸಮುದಾಯವನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಇದು ನಡೆಯುವುದಿಲ್ಲ. ಬಿಜೆಪಿಗೆ ಬಿಲ್ಲವರ ಬಗ್ಗೆ ಪ್ರೀತಿ ಇರುತ್ತಿದ್ದರೆ ಅಧಿಕಾರದಲ್ಲಿದ್ದ ವೇಳೆ ಯಾಕೆ ಸುಮ್ಮನಿತ್ತು ಎಂದು ಸಾಮಾಜಿಕ ತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರೆ, ಕೆಲವರು ವಿಚಾರದ ಪರವಾಗಿಯೂ ಮಾತನಾಡಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯ ನಡೆ ವಿವಾದಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಕಾದುನೋಡಬೇಕು.

 

 

LEAVE A REPLY