ರಾಜ್ಯದ ಮೊದಲ ನಗದುರಹಿತ ಗ್ರಾ ಪಂ ಉಡುಪಿ ಜಿಲ್ಲೆಯಲ್ಲಿ

ನಮ್ಮ ಪ್ರತಿನಿಧಿ ವರದಿ
ಉಡುಪಿ : ಕೋಟತಟ್ಟು ಗ್ರಾಮ ಪಂಚಾಯತನ್ನು ರಾಜ್ಯದ ಮೊತ್ತಮೊದಲ ನಗದು ರಹಿತ ಗ್ರಾಮ ಪಂಚಾಯತ್ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಭಾನುವಾರ ಘೋಷಣೆ ಮಾಡಿದ್ದಾರೆ.
ಸಂಪೂರ್ಣ ನಗದುರಹಿತ ವ್ಯವಹಾರವನ್ನು ಹೊಂದಿರುವ ಗ್ರಾಮ ಪಂಚಾಯತ್ ಎನ್ನುವ ಹೆಗ್ಗಳಿಕೆಗೆ ಈ ಗ್ರಾಮ ಪಂಚಾಯತ್ ಭಾಜನವಾಗಿದೆ. ಬಿಲ್ ಪಾವತಿ ಸೇರಿದಂತೆ ಪಂಚಾಯತನ ಎಲ್ಲಾ ವ್ಯವಹಾರವನ್ನು ಇನ್ಮೇಲೆ ಡಿಜಿಟಲ್ ವ್ಯವಸ್ಥೆಯಡಿ ನಿರ್ವಹಣೆಯಾಗಲಿದೆ.
5523 ಮಂದಿ ಜನಸಂಖ್ಯೆಯನ್ನು ಹೊಂದಿರುವ ಕೋಟತಟ್ಟು ಗ್ರಾಮ ಪಂಚಾಯತದಲ್ಲಿನ ಚುನಾಯಿತ ಸದಸ್ಯರ ಸಹಕಾರವನ್ನು ಪಡೆದುಕೊಳ್ಳುವ ಮೂಲಕ ಈ ಸಾಧನೆ ಮಾಡಲಾಗಿದೆ. ಇಲ್ಲಿ 1,032 ಕುಟುಂಬಗಳಿವೆ. 200 ಮಂದಿಯಲ್ಲಿ ಡೆಬಿಟ್ ಕಾರ್ಡ್‍ಗಳಿಲ್ಲ. 80 ಮಂದಿ ಬ್ಯಾಂಕ್ ಪಾಸ್ ಪುಸ್ತಕವನ್ನೇ ಹೊಂದಿಲ್ಲ. ಇದನ್ನು ಅರಿತ ಅಧಿಕೃತರು ಕೂಡಲೇ ಜಾಗೃತಿ ಮೂಡಿಸಿ ಎಲ್ಲರನ್ನೂ ಬ್ಯಾಂಕ್ ಪಾಸ್ಬುಕ್, ಡೆಬಿಟ್ ಕಾರ್ಡ್ ಪಡೆಯುವಂತೆ ಮಾಡಿ, ನಗದುರಹಿತ ವ್ಯವಹಾರಕ್ಕೆ ಅವರನ್ನು ಮುಂದಾಗುವಂತೆ ಮಾಡಿದ್ದಾರೆ.
ಕೋಟತಟ್ಟು ಗ್ರಾಮ ಪಂಚಾಯತ್ ಮಾದರಿ ಗ್ರಾಮ ಪಂಚಾಯತ್ ಆಗಿದ್ದು, ಜನಪ್ರತಿನಿಧಿಗಳ ಆಸಕ್ತಿಯಿಂದಾಗಿ ಕ್ಯಾಶ್ ಲೆಸ್ ಸಿಸ್ಟಂ ಅಳವಡಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಸಚಿವ ರಮೇಶ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.