ನಿವೇಶನ ಸಮತಟ್ಟು ಮಾಡಲು ಆಗ್ರಹಿಸಿ ಪಾಲಿಕೆ ಎದುರು ಕೊರಗರ ಪ್ರತಿಭಟನೆ

ಪಾಲಿಕೆ ಎದುರು ಪ್ರತಿಭಟಿಸಿದ ಹೋರಾಟಗಾರರು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಹೆದ್ದಾರಿ ನಿರ್ಮಾಣ ಯೋಜನೆಯಡಿಯಲ್ಲಿ ನಿರ್ವಸಿತರಾಗಿರುವ ಕೊರಗ ಕುಟುಂಬಗಳಿಗೆ ನೀಡಲಾಗಿರುವ ಪದವು ಸರಿಪಳ್ಳದ ನಿವೇಶನವನ್ನು ಸಮತಟ್ಟುಗೊಳಿಸಬೇಕೆಂದು ಹಾಗೂ ನೀರಿನ ಸಂಪರ್ಕ ಕಲ್ಪಿಸಬೇಕೆಂದು ಆಗ್ರಹಿಸಿ ಪಾಲಿಕೆಯ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

8 ಕೊರಗ ಕುಟುಂಬದ ಸದಸ್ಯರು, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸದಸ್ಯರು, ಸಿಪಿಐಎಂ ಕಾರ್ಯಕರ್ತರು ಸೇರಿದಂತೆ 100ಕ್ಕೂ ಮಿಕ್ಕಿದ ಪ್ರತಿಭಟನಾಕಾರರು “ದ ಕ ಜಿಲ್ಲೆಯ ಮೂಲನಿವಾಸಿಗಳನ್ನು ಬೀದಿಪಾಲು ಮಾಡಿದ ಮನಪಾಕ್ಕೆ ಧಿಕ್ಕಾರ, ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸಿರಿ, ಕೊರಗ ಕುಟುಂಬಗಳಿಗೆ ಮನೆ ಒದಗಿಸಿರಿ” ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.

ನಗರ ದಕ್ಷಿಣ ಕಾರ್ಯದರ್ಶಿ ಸುನಿಲಕುಮಾರ್ ಬಜಾಲ್ ಮಾತನಾಡುತ್ತಾ, “ದ ಕ ಜಿಲ್ಲೆಯ ಮೂಲನಿವಾಸಿಗಳಾದ ಕೊರಗ ಸಮುದಾಯದ 8 ಕುಟುಂಬಗಳನ್ನು 6 ವರ್ಷಗಳ ಹಿಂದೆ ರಸ್ತೆ ಅಗಲೀಕರಣದ ನೆಪದಲ್ಲಿ ಎತ್ತಂಗಡಿ ಮಾಡಲು ಆಗಮಿಸಿದ ಅಧಿಕಾರಿಗಳು ಭಾರೀ ದಬ್ಬಾಳಿಕೆ  ನಡೆಸಿದ್ದರು. ಯಾವುದೇ ರೀತಿಯ ಪರಿಹಾರ ನೀಡಲು ಸಾಧ್ಯವಿಲ್ಲವೆಂದು ದಬಾಯಿಸಿದಾಗ ಅದರ ವಿರುದ್ಧ ಪ್ರಬಲ ಹೋರಾಟ ಮಾಡಿದ್ದರ ಫಲವಾಗಿ 8 ಕುಟುಂಬಗಳಿಗೂ ಪರಿಹಾರ ಒದಗಿಸಲು ಸಾಧ್ಯವಾಯಿತು. ಮಂಗಳೂರು ನಗರದಲ್ಲೇ ನಿವೇಶನ ನೀಡಿ ಮನೆ ನಿರ್ಮಿಸಿಕೊಡುವ ಭರವಸೆಯನ್ನು ಮನಪಾ ಹಾಗೂ ಜಿಲ್ಲಾಢಳಿತ ನೀಡಿತ್ತು. ಆದರೆ 6 ವರ್ಷಗಳಲ್ಲಿ ಕಿಂಚಿತ್ತೂ ಗಮನ ನೀಡದೇ ಇದ್ದಾಗ ಮತ್ತೆ ಪ್ರಬಲ ಹೋರಾಟ ನಡೆಸಿದಾಗ ಸರಿಪಳ್ಳದಲ್ಲಿ ನಿವೇಶನ ಹಾಗೂ ಹಕ್ಕುಪತ್ರ ನೀಡಲಾಯಿತು. ಆ ಸ್ಥಳವನ್ನು ಸಮತಟ್ಟು ಮಾಡಿಕೊಡಬೇಕು, ಕುಡಿಯುವ ನೀರಿನ ಸಂಪರ್ಕ ಒದಗಿಸಬೇಕೆಂದು ಕಳೆದ ಒಂದು ವರ್ಷದಿಂದ ಮನಪಾಕ್ಕೆ ಮನವಿ ಅರ್ಪಿಸಿದರೂ ಯಾವುದೇ ಸ್ಪಂದನೆಯಿಲ್ಲ. ದಿನ ಬೆಳಗಾದರೆ ಆದಿವಾಸಿಗಳ ಬಗ್ಗೆ ಬಾರೀ ಭರವಸೆಗಳನ್ನು ನೀಡುವ ಸರಕಾರಗಳು, ಅವರ ನಿರ್ದಿಷ್ಟ ಪ್ರಶ್ನೆಗಳು ಬಂದಾಗ ಎಳ್ಳಷ್ಟೂ ಸ್ಪಂದಿಸುವುದಿಲ್ಲ ಎಂಬುದಕ್ಕೆ ನಂತೂರಿನ ಕೊರಗ ಕುಟುಂಬಗಳೇ ಸಾಕ್ಷಿಯಾಗಿದೆ. ಆದಷ್ಟೂ ಶೀಘ್ರದಲ್ಲಿ ಮನೆ ನಿರ್ಮಾಣ ಹಾಗೂ ಅಲ್ಲಿನ ಸ್ಥಳವನ್ನು ಸಮತಟ್ಟುಗೊಳಿಸಲು ಮನಪಾ ಮುಂದಾಗದಿದ್ದಲ್ಲಿ ಮೇಯರ್, ಆಯುಕ್ತರ ಕಚೇರಿಗೆ ಮುತ್ತಿಗೆ, ಉಪವಾಸ ಸತ್ಯಾಗ್ರಹ ಮುಂತಾದ ತೀವ್ರ ತರದ ಹೋರಾಟಗಳನ್ನು ನಡೆಸಬೇಕಾದೀತು” ಎಂದು ಎಚ್ಚರಿಕೆ ನೀಡಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ನಾಯಕರಾದ ಕೃಷ್ಣಪ್ಪ ಕೊಂಚಾಡಿಯವರು, “ನಂತೂರಿನ ಕೊರಗ ಕುಟುಂಬಗಳಿಗೆ ಈಗಾಗಲೇ ನೀಡಿರುವ ಸರಿಪಳ್ಳದ ಜಾಗವು ಮುರಕಲ್ಲು, ಮರ ಮತ್ತು ಎತ್ತರ ತಗ್ಗು ದಿಣ್ಣೆಗಳಿಂದ ಕೂಡಿದ್ದು ಈ ಜಾಗದಲ್ಲಿ ಮನೆ ನಿರ್ಮಿಸಲು ನೆಲವನ್ನು ಸಮತಟ್ಟು ಮಾಡಬೇಕು. ಕಳೆದ ಅಕ್ಟೋಬರಿನಿಂದ ನಿರಂತರ ಮನವಿ ಹೋರಾಟ ಮಾಡಿದ್ದರೂ ಮನಪಾ ಹಾಗೂ ಐಟಿಡಿಪಿ ಸ್ಪಂದಿಸುತ್ತಿಲ್ಲ. ಐಟಿಡಿಪಿ ನೀಡುವ 2 ಲಕ್ಷ ರೂಪಾಯಿಯಿಂದ ಮನೆ ನಿರ್ಮಿಸಲು ಸಾಧ್ಯವಿಲ್ಲ ಎಂದಾಗ ಅದರಲ್ಲಿ ಸುಸಜ್ಜಿತವಾದ ಮನೆಯನ್ನೇ ನಿರ್ಮಿಸಬಹುದು ಎಂದು ಐಟಿಡಿಪಿ ಅಧಿಕಾರಿಗಳು ಉದ್ದಟತನ ತೋರಿಸಿರುವುದು ತೀರಾ ಖಂಡನೀಯವಾಗಿದೆ” ಎಂದು ಹೇಳಿದರು.