ಕೊಂಕಣಿ-ತುಳು ಚಿತ್ರ `ಅಶೆ ಝಲೆ ಕಶೆ ? ಇಂಚ ಆಂಡ ಎಂಚ ?’ ನಾಳೆ ಬಿಡುಗಡೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೋಸ್ಟಲ್ ವುಡ್ಡಿನಲ್ಲಿ  ಹೊಸ ಪ್ರಯೋಗವೊಂದು ನಡೆದಿದೆ. ಪ್ರಪ್ರಥಮ ಬಾರಿಗೆ  ತುಳು-ಕೊಂಕಣಿ ಭಾಷೆಯ ಚಿತ್ರವೊಂದು ಮೂಡಿ ಬಂದಿದೆ. `ಅಶೆ ಝಲೆ ಕಶೆ ? ಇಂಚ ಆಂಡ ಎಂಚ ?’ ಎಂಬ ಹೆಸರಿನ ಚಿತ್ರ ಎಪ್ರಿಲ್ 21ರಂದು ನಗರದ ಸುಚಿತ್ರಾ ಟಾಕೀಸಿನಲ್ಲಿ ಬಿಡುಗಡೆಗೊಳ್ಳಲು ಸಿದ್ಧವಾಗಿದೆ.

ವಿಶಿಷ್ಟ ಯತ್ನವೊಂದರಲ್ಲಿ ಕರಾವಳಿಯ ಎರಡು ಪ್ರಮುಖ ಭಾಷೆಗಳಾದ ತುಳು ಹಾಗೂ ಕೊಂಕಣಿಯನ್ನು ಮೇಳೈಸಿ ಈ ಚಿತ್ರ ನಿರ್ಮಿಸಲಾಗಿದ್ದು  ಕೆಲ ಹಿಂದಿ ಮತ್ತು ಇಂಗ್ಲಿಷ್  ಸಂಭಾಷಣೆಗಳೂ ಚಿತ್ರದಲ್ಲಿ ಅಡಕವಾಗಿವೆ ಎನ್ನುತ್ತಾರೆ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ.

ಎರಡೂ ಭಾಷೆಗಳ ನಡುವಿನ ಮಧುರ ಬಾಂಧವ್ಯದ ಸಂಕೇತವಾಗಿ ಈ ಚಿತ್ರವನ್ನು ಹೊರತರುವ ಉದ್ದೇಶದಿಂದ ಅದಕ್ಕೆ ಹೊಂದುವಂತೆ  ಚಿತ್ರಕಥೆಯನ್ನು ಬರೆದಿದ್ದಾರೆ ಚಿತ್ರದ ನಿರ್ದೇಶಕರೂ ಆಗಿರುವ ಮ್ಯಾಕ್ಸಿಮ್ ಪಿರೇರಾ.

“ಹಿಂದೆ ಕೊಂಕಣಿ ಸಿನೆಮಾ ವೀಕ್ಷಿಸಲು ತೆರಳಿದಾಗ ಅಲ್ಲಿ ಕನಿಷ್ಠ 10 ಮಂದಿಯಾದರೂ ಕೊಂಕಣಿಯೇತರರು ಇರುತ್ತಿದ್ದರು. ಅವರಿಗೆ ಕೊಂಕಣಿ ಅರ್ಥವಾಗುತ್ತಿತ್ತೇ ಹೊರತು ಮಾತನಾಡಲು ಬರುತ್ತಿರಲಿಲ್ಲವೆಂದು ತಿಳಿಯಿತು. ಎರಡೂ ಭಾಷೆಗಳನ್ನು ಜತೆಯಾಗಿಸಿ ಚಿತ್ರ ನಿರ್ಮಿಸುವ ಯೋಚನೆ ಆಗ ನನಗೆ ಹೊಳೆಯಿತು” ಎನ್ನುತ್ತಾರೆ ಪಿರೇರಾ.

ಚಿತ್ರಕಥೆಯನ್ನು ಅವರು  ಜೆ ಎಂ ಪೆರ್ಮನ್ನೂರು ಅವರ ಸಹಾಯದಿಂದ ಬರೆದಿದ್ದರೆ, ಸಂಭಾಷಣೆಯನ್ನು ವಿಲಿಯಂ ಪಿಂಟೋ ಪದರಂಗಿ ಬರೆದಿದ್ದಾರೆ. ಖ್ಯಾತ ತುಳು ಹಾಸ್ಯ ಕಲಾವಿದರಾದ ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್  ಬಿಗ್ ಎಫ್‍ಎಂ ಆರ್ಜೆ  ರೂಪೇಶ್ ಶೆಟ್ಟಿ, ಕೊಂಕಣಿ ಕಲಾವಿದರಾದ ಕೊಂಕಣಿ ಟೆಲಿಫಿಲ್ಮ್ ಮಾನಸ ಖ್ಯಾತಿಯ  ಸಿನೊಲ್ ಮಿನೆಜಸ್ ಹಾಗೂ ನಶಿಬಾಚೊ ಖೇಲ್ ಚಿತ್ರದಲ್ಲಿ ಅಭಿನಯಿಸಿರುವ ರಂಜಿತಾ ಲುವಿಸ್ ಸೇರಿದ್ದಾರೆ.

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಆಗಿದೆ. ಮಂಗಳೂರು, ಪುತ್ತೂರು, ಮಣಿಪಾಲ, ಉಡುಪಿ, ಸುರತ್ಕಲ್ ಇನೊಕ್ಸ್, ಸಿನೆಪೊಲಿಸ್, ಪಿವಿಆರ್ ಮತ್ತು ಬಿಗ್ ಸಿನೆಮಾಸ್ ಇಲ್ಲಿ ಈ ಚಿತ್ರ ತೆರೆ ಕಾಣಲಿದೆ.