ಹಳಿ ದ್ವಿಪಥೀಕರಣಕ್ಕೆ ತೀವ್ರ ಗತಿ ನೀಡಲಿರುವ ಕೊಂಕಣ ರೈಲ್ವೇ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಇಲ್ಲಿನ ವಾಣಿಜ್ಯ ಬಂದರಿನ 2ನೇ ಹಂತದ ಕಾಮಗಾರಿಗೆ ಯೋಜನೆ ಸಿದ್ಧಗೊಂಡಿರುವ ಬೆನ್ನಲ್ಲೆ ಬಂದರಿಗೆ ಕೊಂಕಣ ರೈಲ್ವೇ ಯೋಜನೆಯ ಹಳಿ ಜೋಡಣೆಯ ಪ್ರಯತ್ನಗಳು ನಡೆಯುತ್ತಿದ್ದು, ರೈಲು ಮಾರ್ಗ ದ್ವಿಪಥೀಕರಣ (ಡಬ್ಲಿಂಗ್) ಮತ್ತು ಮಾರ್ಗವನ್ನು ವಿದ್ಯುತ್ತೀಕರಣ ಮಾಡುವ ಮಹತ್ವಪೂರ್ಣ ಯೋಜನೆಗೆ ತೀವ್ರಗತಿ ನೀಡಲು ಕೊಂಕಣ ರೈಲ್ವೇ ಮುಂದಾಗಿದೆ.

ಕೊಂಕಣ ರೈಲ್ವೇ 25 ವರ್ಷ ಪೂರೈಸಿದ ಸಂಭ್ರಮದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಉತ್ಸುಕತೆ ತೋರಿದೆ. ಈ ಸಂಬಂಧ ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಡಬ್ಲಿಂಗ್ ಕಾಮಗಾರಿಗಳು ಆರಂಭವಾಗಿದ್ದು, ಅದನ್ನು ಉತ್ತರ ಕನ್ನಡಕ್ಕೆ ಸಹ ವಿಸ್ತರಿಸಲು ಕೊಂಕಣ ರೈಲ್ವೇಗೆ ಲಭ್ಯವಿರುವ ಭೂಮಿಯ ಮಾಹಿತಿಯನ್ನು ಕೊಂಕಣ ರೈಲ್ವೇ ಪ್ರಧಾನ ಕಚೇರಿ ಪಡೆದಿದೆ. ಅಲ್ಲದೇ ಮುರ್ಡೇಶ್ವರ ರೈಲ್ವೇ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯ ಹಾಗೂ ಮಿರ್ಜಾನಿನಲ್ಲಿ ಹೊಸ ರೈಲ್ವೇ ಸ್ಟೇಶನ್ ನಿರ್ಮಾಣಕ್ಕೆ ಸಹ ಮುನ್ನುಡಿ ಬರೆಯಲಾಗಿದೆ.

ಕಾರವಾರ ಬಂದರಿಗೆ ಕೊಂಕಣ ರೈಲ್ವೇ ಮಾರ್ಗ ರೂಪಿಸುವ ಯೋಜನೆಗೆ 2007-08ರಲ್ಲೇ ಸರ್ವೇ ನಡೆದಿದೆ. ಇದೀಗ 2017 ಮೇ ತಿಂಗಳಲ್ಲಿ ಹೊಸ ಸರ್ವೇ ಕಾರ್ಯಕ್ಕಾಗಿ ಕೊಂಕಣ ರೈಲ್ವೇ ಮತ್ತು ಬಂದರು ಇಲಾಖೆಯ ನಡುವೆ ಕಾಗದ ಪತ್ರ ವ್ಯವಹಾರ ನಡೆದಿದೆ. ಯೋಜನಾ ವೆಚ್ಚ 18 ಕೋಟಿ ರೂಪಾಯಿಯಲ್ಲಿ ಸರ್ವೇಗಾಗಿ ಶೇ 2ರಷ್ಟು ಹಣ ಠೇವಣಿ ಇರಿಸಲು ಮಾತ್ರ ಬಂದರು ಇಲಾಖೆ ಹಿಂದೇಟು ಹಾಕಿದೆ. ಕಾರವಾರದ ರೈಲ್ವೇ ಸ್ಟೇಶನ್ ಶಿರವಾಡದಿಂದ ಕಾರವಾರ ಬಂದರಿಗೆ 9 ಕಿ ಮೀ ಉದ್ದಕ್ಕೆ ರೈಲು ಮಾರ್ಗ ರೂಪಿಸುವ ಯೋಜನೆ ಇದಾಗಿದೆ. ಇದು 4 ಕಿ ಮೀ ಸುರಂಗ ಮಾರ್ಗವನ್ನು ಹೊಂದಿದೆ.

ಕಾರವಾರ ಬಂದರಿಗೆ ಕೊಂಕಣ ರೈಲು ಮಾರ್ಗ ಜೋಡಣೆಯಿಂದ ಉತ್ತರ ಕರ್ನಾಟಕದ ಸರಕು ಹೊರದೇಶಗಳಿಗೆ, ಹೊರ ರಾಜ್ಯಗಳಿಗೆ ರಫ್ತು ಮಾಡಲು ಅನುಕೂಲವಾಗಲಿದೆ. ಹಾಗೆಯೇ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಬೃಹತ್ ಕಾರ್ಖಾನೆಗಳಿಗೆ, ಕೈಗಾ, ಸೀಬರ್ಡ್ ಯೋಜನೆಗೆ ಬೇಕಾದ ಯಂತ್ರಗಳನ್ನು ಕಾರವಾರ ಬಂದರಿಗೆ ತರಿಸಿಕೊಂಡು ಅವುಗಳನ್ನು ರೈಲ್ವೇ ಮಾರ್ಗದ ಮೂಲಕ ಸಾಗಿಸಬಹುದಾಗಿದೆ. ಬಂದರಿನ ಆದಾಯ 100 ಪಟ್ಟು ಹೆಚ್ಚಲಿದೆ. ಕೊಂಕಣ ರೈಲ್ವೇ ಮಾರ್ಗವನ್ನು ಅತ್ತ ಕೈಗಾ ಯೋಜನಾ ಸ್ಥಳದವರೆಗೆ ವಿಸ್ತರಿಸಬಹುದಾಗಿದೆ. ಹತ್ತು ಹಲವು ಅನುಕೂಲಗಳು ಕಾರವಾರ ಬಂದರಿಗೆ ರೈಲು ಮಾರ್ಗ ಜೋಡಣೆಯಿಂದ ಇದ್ದು, ಭಾರತದ ಪಶ್ಚಿಮ ಕರಾವಳಿ ರಕ್ಷಣೆಯ ದೃಷ್ಟಿಯಿಂದ ಸಹ ಈ ಯೋಜನೆಯ ರೈಲು ಮಾರ್ಗ ಭವಿಷ್ಯದಲ್ಲಿ ಗರಿಗೆದರಿ ನಿಲ್ಲುವುದು ಖಚಿತವಾಗಿದೆ.