ಗುಜರಿ ಹೆಕ್ಕಿ ಮಗನ ಎಸೈ ಮಾಡಿದ ತಾಯಿ

ಕೊಣಾಜೆ ಠಾಣೆಯಲ್ಲಿ

ರವಿ ಈಗ ಸಬ್ ಇನಸ್ಪೆಕ್ಟರ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ತಮ್ಮ ಮಕ್ಕಳು ಚೆನ್ನಾಗಿ ಓದಿ ವಿದ್ಯೆ ಕಲಿತು ಒಳ್ಳೆಯ ಉದ್ಯೋಗ ಪಡೆದುಕೊಳ್ಳಬೇಕೆನ್ನುವುದು ತಂದೆ-ತಾಯಿಯಂದಿರ ಆಸೆ. 13 ವರ್ಷಗಳ ಹಿಂದೆ ದೂರದ ಬಾಗಲಕೋಟೆಯಿಂದ ಕೂಲಿ ಕೆಲಸ ಅರಸಿ ಮಂಗಳೂರಿಗೆ ಬಂದಿದ್ದ ದಂಪತಿ ಆಸೆಯೂ ಅದೇ ಆಗಿತ್ತು. ಇದೀಗ ಅವರ ಆಸೆ ಕೈಗೂಡಿದೆ. ಪುತ್ರ ಇದೀಗ ತಾವೇ ಪಂಚಾಂಗ ಹಾಕಿ ಕೂಲಿ ಕೆಲಸ ಮಾಡಿದ ಪೊಲೀಸ್ ಠಾಣೆಯ ಕಟ್ಟಡದಲ್ಲಿ ನೂತನ್ ಸಬ್ ಇನಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ !

ಇದೀಗ ಕೊಣಾಜೆ ಪೊಲೀಸ್ ಠಾಣೆಯ ನೂತನ ಸಬ್ ಇನಸ್ಪೆಕ್ಟರ್ ಆಗಿರುವ ರವಿ ತಮ್ಮ ತಂದೆತಾಯಿಯ ಆಸೆ ಪೂರೈಸಿದ್ದಾರೆ. ಬೀಳಗಿ ತಾಲೂಕಿನ ಸುನಗ ಗ್ರಾಮದ ಪಿರೂ ಪವಾರ್ ಮತ್ತು ಸುಮಿತ್ರ ದಂಪತಿ ಕೊಣಾಜೆ, ಉರ್ವ ಪೊಲೀಸ್ ಠಾಣೆ ಹಾಗೂ ನೆಲ್ಯಾಡಿಯ ಸರಕಾರಿ ವಸತಿ ಗೃಹ ಕಟ್ಟಡದ ಪಾಯ ಅಗೆಯುವ ಕೆಲಸ ಮಾಡಿದ್ದರು. ಚಿಕ್ಕಂದಿನಲ್ಲೇ ರವಿ ಅವರು ಮಂಗಳೂರಿನಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಎಂದು ಪೋಷಕರೊಂದಿಗೆ ವಲಸೆ ಬಂದು ಇಲ್ಲಿ ವಾಸಿಸುತ್ತಾ ವಿದ್ಯಾಭ್ಯಾಸ ಪೂರೈಸುತ್ತಿದ್ದರು.

ಮೀನಕಳಿಯ ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಕಲಿದ್ದರು. ಚಿಮಿಣಿ ದೀಪದ ಬೆಳಕಿನಲ್ಲಿ ಓದಿ ಎಸ್ಸೆಸ್ಸೆಲ್ಸಿಯಲ್ಲಿ ರವಿ 523 ಅಂಕ ಪಡೆದು ಶಾಲೆಗೆ ಪ್ರಥಮರಾಗಿದ್ದರು. ಬಳಿಕ ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಪಡೆದು ಗೋಕರ್ಣನಾಥ ಕಾಲೇಜಿನಲ್ಲಿ ಕಲಿತರು. ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೈನ್ಸ್ ಓದಿದರು.

ತಮ್ಮ ಶೈಕ್ಷಣಿಕ ಬದುಕಿನದ್ದಕ್ಕೂ ರವಿ ಪವಾರ ತಂದೆ, ತಾಯಿಯೊಂದಿಗೆ ಕೂಲಿ ಕೆಲಸ ಮಾಡಿಕೊಂಡಿದ್ದರು. ಬಳ್ಳಾರಿಯಿಂದ ಎನ್ನೆಂಪಿಟಿಗೆ ಬರುತ್ತಿದ್ದ ರೈಲಿನ ಅದಿರು ಖಾಲಿ ಮಾಡಿದರೆ ಒಂದು ಬೋಗಿಗೆ 900 ರೂ ಸಿಗುತ್ತಿತ್ತು. ಯೂರಿಯಾವನ್ನೂ ನಾನು ಖಾಲಿ ಮಾಡಿದ್ದೆ ಎಂದು ನೆನಪಿಸಿಕೊಳ್ಳುತ್ತಾರೆ ರವಿ.

ಹೆಣ್ಣುಮಕ್ಕಳ ಮದುವೆ ಮಾಡಿ ಪೀರೂ ಪವಾರ ಸಾಲದಲ್ಲಿ ಮುಳುಗಿದ್ದರು. ಹೀಗಾಗಿ ರವಿಯನ್ನು ಓದಿಸುವುದಕ್ಕೆ ಕಷ್ಟ ಸಾಧ್ಯವಾಗಿತ್ತು. ತಾಯಿ ಸುಮಿತ್ರ ಗುಜರಿ ಹೆಕ್ಕಿ ಮಗನ ವಿದ್ಯಾಭ್ಯಾಸಕ್ಕೆ ನೆರವಾದರು. ಪಿಎಸೈ ಹುದ್ದೆಗೆ ಅರ್ಜಿ ಸಲ್ಲಿಸಿದರೂ ಉದ್ಯೋಗದ ಭರವಸೆ ಇರಲಿಲ್ಲ. ಆದರೆ ಜನರಲ್ ಮೆರಿಟಿನಲ್ಲಿ 22ನೇ ಸ್ಥಾನ ಪಡೆದು ಇದೀಗ ಸಬ್ ಇನಸ್ಪೆಕ್ಟರ್ ಆಗಿದ್ದಾರೆ.

ಇದೀಗ ಅಸೈಗೋಳಿಯಲ್ಲಿರುವ ಪೊಲೀಸ್ ವಸತಿ ಗೃಹದಲ್ಲಿ ಹೆತ್ತವರೊಂದಿಗೆ ರವಿ ವಾಸ ಮಾಡಿಕೊಂಡಿದ್ದಾರೆ. ಅಲ್ಲದೆ ಕೆಎಎಸ್ ಪರೀಕ್ಷೆ ತಯಾರಿ ನಡೆಸುತ್ತಿರುವ ರವಿ ಅರ್ಹತಾ ಪರೀಕ್ಷೆ ತೇರ್ಗಡೆಯಾಗಿದ್ದಾರೆ. ಡಿಸೆಂಬರ್ 16ರಂದು ಇವರು ಮುಖ್ಯಪರೀಕ್ಷೆ ಬರೆಯಲಿದ್ದಾರೆ. ಸಮಾಜಕ್ಕೆ ಏನಾದರೂ ಒಳ್ಳೆಯ ಕೆಲಸ ಮಾಡಬೇಕು ಎನ್ನುವ ಮನದಾಸೆಯನ್ನು ಅವರು ಹೊಂದಿದ್ದಾರೆ.