ಕೋಲ್ನಾಡು ಬಳಿ ಅಪಘಾತದಲ್ಲಿ ಗಾಯಗೊಂಡವರು ಚೇತರಿಕೆ

ಅಪಘಾತಕ್ಕೀಡಾದ ಕಂಟೈನರ್

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಕೋಲ್ನಾಡು ಬಳಿ ಲಾರಿ, ಕಂಟೈನರ್ ಮತ್ತು ಟಾಟಾ ಸುಮೋ ನಡುವೆ ನಡೆದ ಸರಣಿ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಚೇತರಿಸಿಕೊಳ್ಳುತ್ತಿದ್ದಾರೆ.

ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿರುವುದು
ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿರುವುದು

ಅಪಘಾತದಲ್ಲಿ ಗಾಯಗೊಂಡವರನ್ನು ಕಂಟೈನರ್ ಚಾಲಕ ತಮಿಳುನಾಡು ನಿವಾಸಿ ವೆಂಕಟೇಶ್(52) ಹಾಗೂ ಲಾರಿಯಲ್ಲಿದ್ದ ಚಾಲಕರನ್ನು ಮಹಾರಾಷ್ಟ್ರ ನಿವಾಸಿಗಳಾದ ದತ್ತಾತ್ರೇಯ, ವೆಂಕಟರಮಣ ಎಂದು ಗುರುತಿಸಲಾಗಿದೆ.

ಪಣಂಬೂರಿನಿಂದ ಪಡುಬಿದ್ರೆ ಕಂಪನಿಯ ಸಾಮಾನುಗಳನ್ನು ಕೊಂಡುಹೋಗುತ್ತಿದ್ದ ಕಂಟೈನರ್ ಪುಣೆಯಿಂದ ಮಂಗಳೂರು ಕಡೆಗೆ ನೀರುಳ್ಳಿ ಹೇರಿಕೊಂಡು ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿ ಸುಮಾರು 10 ಅಡಿ ಆಳದ ಗುಂಡಿಗೆ ಬಿದ್ದಿದೆ. ಅಪಘಾತದ ಸಂದರ್ಭ ಲಾರಿಯ ಚಾಲಕ ಬ್ರೇಕ್ ಹಾಕಿದಾಗ ಹಿಂದೆ ಇದ್ದ ಟಾಟಾ ಸುಮೋ ಲಾರಿಗೆ ಹಿಂಭಾಗದಿಂದ ಡಿಕ್ಕಿ ಹೊಡೆದು ಜಖಂಗೊಂಡಿತ್ತು. ಅಪಘಾತದ ರಭಸಕ್ಕೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರ್ ಮೇಲೇರಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಸುರತ್ಕಲ್ ಟ್ರಾಫಿಕ್ ಪೊಲೀಸರು ಕ್ರೇನ್ ಬಳಸಿ ಲಾರಿಯನ್ನು ಸ್ಥಳದಿಂದ ತೆರವುಗೊಳಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದರು.

ಲಾರಿಯಲ್ಲಿದ್ದ ಚಾಲಕ ಸಹಿತ ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅಪಘಾತದಿಂದ ಟಾಟಾ ಸುಮೋ ವಾಹನಕ್ಕೂ ಹಾನಿಯಾಗಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದ.

ಅಪಾಯಕಾರಿ ಏಕಮುಖ ರಸ್ತೆ

ಮುಲ್ಕಿಗೆ ಬರುವ ತುಂಬೆ ನೀರಿನ ಪೈಪುಗಳನ್ನು ರಾಷ್ಟ್ರೀಯ ಹೆದ್ದಾರಿಯ ಅಡಿಯಲ್ಲಿ ಅಳವಡಿಸಿದ್ದು ಪೈಪು ಸೋರುತ್ತಿರುವುದರಿಂದ ಹೆದ್ದಾರಿ ಅಗೆದಿದ್ದಾರೆ. ಇದರಿಂದ ಕೋಲ್ನಾಡಿನಿಂದ ಪಡುಪಣಂಬೂರಿನವರೆಗೆ ಹೆದ್ದಾರಿಯನ್ನು ಏಕಮುಖವನ್ನಾಗಿ ಪರಿವರ್ತಿಸಲಾಗಿದೆ. ಹೆದ್ದಾರಿ ಅಡಿಯಲ್ಲಿ ಸೋರುತ್ತಿರುವ ಪೈಪುಗಳನ್ನು ತೆಗೆಯುವ ಕಾಮಗಾರಿ ನಡೆಯುತ್ತಿದ್ದು, ಶೆಡಿ ಮಣ್ಣಿನ ಕಾರಣ ಮಣ್ಣು ಸವೆತವಾಗುತ್ತಿದ್ದು, ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ.

ಪೈಪುಗಳನ್ನು ಸರಿಪಡಿಸಲು ಸುಮಾರು 5ರಿಂದ 10 ದಿನಗಳು ಬೇಕಾಗಬಹುದು ಎಂದು ಹೆದ್ದಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಅದುವರೆಗೂ ಹೆದ್ದಾರಿಯಲ್ಲಿ ಏಕಮುಖ ರಸ್ತೆಯು ಅಪಾಯಕಾರಿಯಾಗಿ ಪರಿಣಮಿಸಲಿದೆ.