ಇನ್ನೆಂದೂ ಆತ್ಮಹತ್ಯೆ ಮಾಡುವುದಿಲ್ಲ ಎಂದಿದ್ದ ಬಾಬು ಗೌಡ

ಕೊಕ್ಕಡ ಸಾಮೂಹಿಕ ಆತ್ಮಹತ್ಯೆ ಪ್ರಕರಣ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಕೊಕ್ಕಡ ಗ್ರಾಮದ ಎಂಡೋಪೀಡಿತ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಪ್ರಕರಣದಲ್ಲಿ ಮೃತಪಟ್ಟ ಬಾಬು ಗೌಡ ಹಿಂದೊಮ್ಮೆ ಆತ್ಮಹತ್ಯೆಗೆ ಯತ್ನಿಸಿದ ಸಂದರ್ಭ ಸಾಂತ್ವನ ಹೇಳಿದ ನೆರೆಮನೆಯ ನಿವಾಸಿ ಸ್ಥಳೀಯ ಗ್ರಾ ಪಂ ಮಾಜಿ ಸದಸ್ಯ ಶಿವರಾಮ ನಾಯ್ಕ್ ಎಂಬವರಲ್ಲಿ “ಇನ್ನೆಂದೂ ಆತ್ಮಹತ್ಯೆ ನಿರ್ಧಾರ ಮಾಡುವುದಿಲ್ಲ” ಎಂದು ಕೈತಟ್ಟಿ ಆಣೆ ಹಾಕಿದ್ದರು ಎಂಬ ವಿಚಾರ ಇದೀಗ ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.

ಇಡೀ ಕುಟುಂಬದ ಬಗ್ಗೆ ನೆನೆದು ಮಾನಸಿಕವಾಗಿ ತೀವ್ರ ನೊಂದಿದ್ದ ಬಾಬು ಗೌಡ ಕೆಲವು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರೂ ಕೊನೆಯ ಕ್ಷಣ ಮನಸ್ಸಿನ ನಿರ್ಧಾರ ಬದಲಿಸಿಕೊಂಡು ಬದುಕಿದ್ದರು. ಈ ಸಂದರ್ಭ ವಿಚಾರಿಸಿದ್ದ ನೆರೆಮನೆಯ ಹಿತೈಷಿಗಳು ಸಮಾಧಾನ ಹೇಳಿ ಮನವೊಲಿಸಿದ್ದರು. ಏನೇ ಕಷ್ಟ, ಸಮಸ್ಯೆಗಳಿದ್ದರೂ ಅದರ ಬಗ್ಗೆ ಸಂಬಂಧಿಕರು, ಹಿರಿಯರು ಕುಳಿತು ಮಾತನಾಡಿ, ಬಗೆಹರಿಸಿಕೊಳ್ಳೋಣ ಎಂದು ಆತ್ಮೀಯವಾಗಿ ತಿಳಿಸಿದಾಗ ಬಾಬು ಗೌಡರು ಒಪ್ಪಿಕೊಂಡಿದ್ದರು.

ಕೈತಟ್ಟಿ ಭಾಷೆ ಕೊಡಿ ಎಂದು ಹೇಳಿದಾಗ ಆತ್ಮಹತ್ಯೆಯ ತೀರ್ಮಾನ ಕೈಗೊಳ್ಳುವುದಿಲ್ಲ. ಆದರೆ ನೀವು ಹೇಳಿದಂತೆ ಕೈಭಾಷೆ ಕೊಡುವುದಿಲ್ಲ ಎಂದು ಬಾಬು ಗೌಡ ಹೇಳಿದ್ದರೆಂದು ಶಿವರಾಮ ನಾಯ್ಕ್ ತಿಳಿಸಿದ್ದಾರೆ.

ಸಾಮೂಹಿಕ ಆತ್ಮಹತ್ಯೆ ನಡೆದ ಹಿಂದಿನ ದಿನ ಬಾಬು ಗೌಡರ ಖಿನ್ನತೆಯನ್ನು ಸಾಂತ್ವನದ ಮೂಲಕ ಮನವೊಲಿಸಿ ಬಗೆಹರಿಸಲೆಂದು ಕುಟುಂಬಸ್ಥರು ಕಡಬ, ಪಂಜ ಪ್ರದೇಶದಿಂದ ಬಂದಿದ್ದು, ಈ ಸಂದರ್ಭ ಕಿರಿಮಗ ಹೊರತುಪಡಿಸಿ ಇತರ ನಾಲ್ವರೂ ಮನೆಯಲ್ಲಿದ್ದರು. ಮಾತುಕತೆಗೆ ಬಂದಿದ್ದ ಸಂಬಂಧಿಕರು ಧೈರ್ಯದ ಮಾತುಗಳನ್ನು ಮನೆಯವರಿಗೆಲ್ಲ ಹೇಳಿದ್ದರು. ಬಳಿಕ ಅಂದು ಮಧ್ಯಾಹ್ನ ಇನ್ನೊಬ್ಬ ಮಗ ನಿತ್ಯಾನಂದ ಮನೆಯಿಂದ ಹೊರ ಹೋಗಿದ್ದು, ಸಂಜೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದರು.

ಮಗ ನಿತ್ಯಾನಂದ ಸಂಜೆಯಾದರೂ ಬಾರದಿದ್ದಾಗ ಬಾಬು ಗೌಡ ಮತ್ತು ಪತ್ನಿ ಮೊದಲೇ ತಂದಿಟ್ಟಿದ ಅದ್ಯಾವುದೋ ವಿಷ ಪದಾರ್ಥ ಸೇವಿಸಿ, ಖಿನ್ನತೆಯಲ್ಲಿರುವ ಮಗ ಸದಾನಂದನನ್ನು ಒತ್ತಾಯದಲ್ಲಿ ಕೆರೆದು ದೂಡಿ ಹಾಕಿರುವ ಸಾಧ್ಯತೆಯೂ ಶವದ ಕೊರಳಲ್ಲಿದ್ದ ಹಗ್ಗ ಮತ್ತು ಕೆರೆ ಸಮೀಪದ ಗಿಡಗಳು ತುಂಡಾಗಿರುವುದನ್ನು ಗಮನಿಸಿದಾಗ ತಿಳಿದು ಬರುತ್ತಿದ್ದು, ನಂತರ ಗಂಡ ಮತ್ತು ಹೆಂಡತಿ ಇದೇ ಕೆರೆಗೆ ಹಾರಿದ್ದಾರೆ. ಕೆರೆಯಲ್ಲಿ ಇಳಿಬಿಟ್ಟಿದ್ದ ಪೈಪನ್ನು ಮೊದಲೇ ಮೇಲೆತ್ತಿ ಪಂಪ್ ಶೆಡ್ ಸಮೀಪ ಇಟ್ಟಿರುವುದು ಮತ್ತು ಈ ಶೆಡ್ ಸಮೀಪವೇ ಉರಿಯುತ್ತಲೇ ಇರುವ ಟಾರ್ಚ್ ಲೈಟ್ ಗುರುವಾರ ಮಧ್ಯಾಹ್ನದ ಹೊತ್ತಿನವರೆಗೂ ಉರಿಯುತ್ತಲೇ ಇದ್ದಿರುವುದು ರಾತ್ರಿಯೇ ಕುಟುಂಬ ಸಾಮೂಹಿಕ ಆತ್ಮಹತ್ಯೆ ಗೈದಿರುವುದನ್ನು ಸೂಚಿಸಿದೆ.

`ಸರಕಾರ ಎಂಡೋಪೀಡಿತರ ಬಾಳಿನಲ್ಲಿ ಚೆಲ್ಲಾಟವಾಡುತ್ತಿದೆ’

ಎಂಡೋಪೀಡಿತರ ಕುಟುಂಬ ಸಾಮೂಹಿಕ ಆತ್ಮಹತ್ಯೆಗೈದ ಬೆನ್ನಲ್ಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಎಸ್ಪಿ ಮೂಲಕ  ಕೊಕ್ಕಡ ಎಂಡೋ ಹೋರಾಟಗಾರ ಶ್ರೀಧರ ಗೌಡ ಜಿಲ್ಲಾಡಳಿತಕ್ಕೆ ಮೌಖಿಕ ಮನವಿಯೊಂದನ್ನು ನೀಡಿದ್ದು, ಸರಕಾರವು ಇಂದಿಗೂ ಎಂಡೋಪೀಡಿತರಿಗೆ ಪೂರ್ಣ ಪ್ರಮಾಣದ ವ್ಯವಸ್ಥೆಯನ್ನು ಕಲ್ಪಿಸದೇ ಸಂತ್ರಸ್ತರ ಬಾಳಿನಲ್ಲಿ ಚೆಲ್ಲಾಟವಾಡುತ್ತಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಅಂದಾಜು 3 ಸಾವಿರಕ್ಕೂ ಮೇಲ್ಪಟ್ಟ ಎಂಡೋ ಸಂತ್ರಸ್ತರಿರುವ ಮಾಹಿತಿ ಸರಕಾರದಲ್ಲಿದೆ. ಇಂದಿನ ಸಾಮೂಹಿಕ ಆತ್ಮಹತ್ಯೆಯಂತಹ ಘಟನೆಗಳು ಎಂಡೋ ಸಂತ್ರಸ್ತರ ಮನೋಸ್ಥೈರ್ಯವನ್ನೇ ಕಂಗೆಡಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಶ್ರೀಧರ ಗೌಡ, ಈಗಾಗಲೇ ಹಲವಾರು ಆತ್ಮಹತ್ಯೆಗಳು ನಡೆದಿದ್ದರೂ ಸರಕಾರಕ್ಕೆ ಇನ್ನೂ ತಲುಪಿಲ್ಲ ಹಾಗೂ ಸಂತ್ರಸ್ತರಿಗೆ ನಿರೀಕ್ಷಿತ ಪರಿಹಾರ ನೀಡಲು ಆರೋಗ್ಯ ಇಲಾಖೆ ವಿಫಲವಾಗಿದೆ ಎಂದರು.

ಎಂಡೋ ಸಂತ್ರಸ್ತರ ಮನವಿಯನ್ನು ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇನೆ. ಈ ಪ್ರಕರಣದ ಗಂಭೀರತೆಯನ್ನು ಕೂಡಲೇ ಮೇಲಧಿಕಾರಿಗಳೆಲ್ಲರಿಗೂ ವಿವರಿಸುವ ಭರವಸೆಯನ್ನು ಎಸ್ಪಿ ನೀಡಿದರು.