ಆಂಗ್ಲರಿಂದ ಕೊಹ್ಲಿ ಪಡೆಯ `ಕ್ಲೀನ್ ಸ್ವೀಪ್’ ಕನಸು ಭಗ್ನ

  • ಎಸ್ ಜಗದೀಶ್ಚಂದ್ರ

ಕೋಲ್ಕತ್ತ : ಸತತ ಎರಡು ಅದ್ಭುತ ಗೆಲುವುಗಳೊಂದಿಗೆ ಸರಣಿಯನ್ನು ಕೈವಶ ಮಾಡಿಕೊಂಡು `ಕ್ಲೀನ್ ಸ್ವೀಪ್’ ಗುರಿ ಹೊಂದಿದ್ದ ಕೊಹ್ಲಿ ಪಡೆಗೆ ಕೋಲ್ಕತ್ತದಲ್ಲಿ ನಡೆದ ಮೂರನೆ ಏಕದಿನ ಪಂದ್ಯದಲ್ಲಿ ಆಂಗ್ಲರು ಆಘಾತ ನೀಡಿದರು.

ಭಾನುವಾರ ಕೋಲ್ಕತ್ತದ ಈಡನ್ ಗಾರ್ಡನಿನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಇಂಡೋ-ಆಂಗ್ಲರ ನಡುವೆ ಗೆಲುವಿಗಾಗಿ ಪೈಪೆÇೀಟಿಯ ಹೋರಾಟವೇ ನಡೆಯಿತು. ಒಂದು ಹಂತದಲ್ಲಿ ಭಾರತೀಯ ಆಟಗಾರರು ಈ ಪಂದ್ಯವನ್ನು ಜಯಿಸುವ ಸನಿಹದಲ್ಲಿದ್ದರು. ಆದರೆ, ಅತ್ಯುತ್ತಮವಾಗಿ ಆಡುತ್ತಿದ್ದ  ಕೇದಾರ್ ಜಾಧವ್ ಔಟಾಗುತ್ತಿದ್ದಂತೆ ಭಾರತೀಯರ ಗೆಲುವಿನ ಲೆಕ್ಕಾಚಾರ ತಲೆಕೆಳಗಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಉತ್ತಮ ಆರಂಭವನ್ನೇ ನೀಡಿತು. ಆರಂಭಿಕರಾದ ಜಾಸನ್ ರಾಯ್ ಹಾಗೂ ಸ್ಯಾಮ್ ಬಿಲ್ಲಿಂಗ್ ಮೊದಲ ವಿಕೆಟಿಗೆ 98 ರನ್ ಸೇರಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.

ಜಾಸನ್ ರಾಯ್ ಎಂದಿನಂತೆ ಈ ಇನ್ನಿಂಗ್ಸಿನಲ್ಲೂ ಆಕರ್ಷಕವಾಗಿ ಆಡಿ 56ರನ್ ಬಾರಿಸಿದರು. ವನ್ ಡೌನ್ ದಾಂಡಿಗನಾಗಿ ಕಣಕ್ಕಿಳಿದ ಜಾನಿ ಬೈಸ್ಟ್ರೋವ್ ತಂಡಕ್ಕೆ 57 ರನ್ನುಗಳ ಉಪಯುಕ್ತ ಕಾಣಿಕೆ ನೀಡಿದರು. ಅಲ್ರೌಂಡರ್ ಬೆನ್ ಸ್ಟೋಕ್ಸ್ ಅಂತಿಮವಾಗಿ ಬಾರಿಸಿದ 57 ರನ್ನುಗಳ ನೆರವಿನಿಂದ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 321 ರನ್ನುಗಳ ಸವಾಲಿನ ಮೊತ್ತವನ್ನೇ ಸೇರಿಸಿತು. ಭಾರತದ ಪರ ಹಾರ್ದಿಕ್ ಪಾಂಡ್ಯಾ 49 ರನ್ನಿಗೆ 3 ವಿಕೆಟ್ ಪಡೆದರೆ, ರವೀಂದ್ರ ಜಡೇಜ 62 ರನ್ನಿಗೆ 2 ವಿಕೆಟ್ ಪಡೆದು ಮಿಂಚಿದರು.

ಆಂಗ್ಲರು ನೀಡಿದ 322 ರನ್ನುಗಳ ಮೊತ್ತವನ್ನು ಬೆಂಬತ್ತಿದ ಭಾರತ ಈ ಪಂದ್ಯದಲ್ಲೂ ಆರಂಭಿಕ ವೈಫಲ್ಯತೆಯನ್ನು ಕಂಡಿತು. ಶಿಖರ್ ಧವನ್ ಬದಲಿಗೆ ಆಡಿದ ಅಜಿಂಕ್ಯ ರಹಾನೆ ಹಾಗೂ ಕೆ ಎಲ್ ರಾಹುಲ್ ಆರಂಭಿಕ ದಾಂಡಿಗರಾಗಿ ಕಣಕ್ಕಿಳಿದರೂ ಅಲ್ಪ ಮೊತ್ತಕ್ಕೆ ಔಟಾದರು.

ಈ ಸಂದರ್ಭದಲ್ಲಿ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ಸ್ಥಿರತೆಯ ಆಟವಾಡಿ ಆಂಗ್ಲ ಬೌಲರುಗಳನ್ನು ದಿಟ್ಟವಾಗಿ ಎದುರಿಸಿದರು. ಕೊಹ್ಲಿ 63 ಎಸೆತಗಳಲ್ಲಿ 55 ರನ್ ಗಳಿಸಿದರು. ಯುವರಾಜ್ 45 ರನ್ನುಗಳಿಗೆ ಔಟಾದರು.

ಸುಸ್ಥಿರ ಬ್ಯಾಟಿಂಗ್ ನಡೆಸಿದ ಈ ಜೋಡಿ ಔಟಾದ ಬಳಿಕ ತಂಡಕ್ಕೆ ಆಸರೆಯಾದವರು ಕೇದಾರ್ ಜಾಧವ್ ಹಾಗೂ ಹಾರ್ದಿಕ್ ಪಾಂಡ್ಯಾ. ಈ ಜೋಡಿ 6ನೇ ವಿಕೆಟಿಗೆ ಶತಕ(104 ರನ್)ದ ಜೊತೆಯಾಟ ನೀಡಿತು. ಆದರೆ ಉತ್ತಮವಾಗಿ ಆಡುತ್ತಿದ್ದ ಪಾಂಡ್ಯಾ ಬೆನ್ ಸ್ಟೋಕ್ಸಿಗೆ ಬಲಿಯಾದರು.

ಕೇದಾರ್ ಜಾಧವ್ ಕ್ರೀಸಿನಲ್ಲಿರುವತನಕ ಭಾರತಕ್ಕೆ ಜಯದ ಭರವಸೆ ಇತ್ತು. ಜಾಧವ್ ಕೊನೆಯ ಓವರಿನ ತನಕವೂ ಗೆಲುವಿಗಾಗಿ ಹೋರಾಟ ನಡೆಸಿದರೂ ಅಂತಿಮವಾಗಿ ಭಾರತ ನಿಗದಿತ 50 ಓವರುಗಳಲ್ಲಿ 9 ವಿಕೆಟಿಗೆ 316 ರನ್ನುಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಆ ಮೂಲಕ ಇಂಗ್ಲೆಂಡಿಗೆ ಭಾರತ ವಿರುದ್ಧ 5 ರನ್ನುಗಳ ವಿರೋಚಿತ ಜಯ ದೊರೆಯಿತು. ಕೊನೆಯಲ್ಲಿ ಏಕಾಂಗಿ ಹೋರಾಟ ನಡೆಸಿದ ಜಾಧವ್ 90 ರನ್ ಬಾರಿಸಿದರು.

ಈ ಗೆಲುವಿನೊಂದಿಗೆ ಆಂಗ್ಲರು ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ `ಕ್ಲೀನ್ ಸ್ವೀಪ್’ ಮುಖಭಂಗದಿಂದ ಪಾರಾದರು. ಈ ಪಂದ್ಯಕ್ಕೆ ಮುನ್ನ ಈಡನ್ ಗಾರ್ಡನಿನಲ್ಲಿ ನಡೆದ 4 ಪಂದ್ಯಗಳಲ್ಲೂ ಮೊದಲು ಬ್ಯಾಟ್ ಮಾಡಿದ ತಂಡಗಳೇ ಗೆಲುವು ಸಾಧಿಸಿದ್ದವು. ಈಗ ಆ ದಾಖಲೆ ಮುಂದುವರಿದಿದೆ.

ಇಂಗ್ಲೆಂಡ್ ತಂಡದ ಗೆಲುವಿನಲ್ಲಿ ಆಲ್ರೌಂಡರ್ ಸಾಧನೆ ತೋರಿದ ಬೆನ್ ಸ್ಟ್ರೋಕ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾದರು. ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೇದಾರ್ ಜಾಧವ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.