ಆಂಗ್ಲರನ್ನು ಸದೆ ಬಡಿದ ಕೊಹ್ಲಿ ಪಡೆಗೆ ಸರಣಿ ಗೆಲುವು

  • ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ 

ಕಟಕ್ : ಮೊದಲ ಪಂದ್ಯದಲ್ಲಿ ವೀರೋಚಿತ ಗೆಲುವು ಪಡೆದಿದ್ದ ಟೀಂ ಇಂಡಿಯಾ ಕಟಕಿನ ಬಾರಾವತಿ ಕ್ರೀಡಾಂಗಣದಲ್ಲಿ  ಇಂಗ್ಲೆಂಡ್ ವಿರುದ್ಧ ಗುರುವಾರ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲೂ ದಿಗ್ವಿಜಯ ಸಾಧಿಸಿದೆ. 3 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆ ಪಡೆದು ಸರಣಿ ವಿಜಯೋತ್ಸವಗೈದಿದೆ.

ಏಕದಿನ ಪಂದ್ಯಗಳ ಸರಣಿಗೆ ಖಾಯಂ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಮೊದಲ ಸರಣಿಯಲ್ಲೇ ಗೆಲುವಿನ ಶ್ರೇಯ ವಿರಾಟ್ ಕೊಹ್ಲಿ ಸಾರಥ್ಯಕ್ಕೆ ಲಭಿಸಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಆರಂಭಿಕ ಆಘಾತದ ನಂತರ ಯುವರಾಜ್ ಸಿಂಗ್ ಮತ್ತು ಎಂ ಎಸ್ ಧೋನಿ ಅವರ ಅಮೋಘ ಆಟದ ನೆರವಿನಿಂದ 381 ರನ್ನುಗಳ ಬೃಹತ್ ಮೊತ್ತವನ್ನೇ ಸೇರಿಸಿತು.

ಅಮೋಘ ಜತೆಯಾಟ

ಟೀಂ ಇಂಡಿಯಾ ಈ ಪಂದ್ಯದಲ್ಲೂ ಆರಂಭಿಕ ದಾಂಡಿಗರ ವೈಫಲ್ಯದಿಂದ ಸಂಕಷ್ಟಕ್ಕೆ ಒಳಗಾಯಿತು. ಕೆ ಎಲ್ ರಾಹುಲ್ ಮತ್ತು ಶಿಖರ್ ಧವನ್ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ಮತ್ತೋಮ್ಮೆ ವಿಫಲರಾದರು. ಮೊದಲ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ ನಾಯಕ ಕೊಹ್ಲಿ ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲಲಿಲ್ಲ. ಈ ಮೂವರು ಆಂಗ್ಲ ವೇಗಿ ಕ್ರಿಸ್ ವೊಕ್ಸರ ಉರಿ ದಾಳಿಗೆ ಬಲಿಯಾದರು.

ಈ ಸಂದರ್ಭ ಜೊತೆಯಾದ ಯುವರಾಜ್ ಸಿಂಗ್ ಹಾಗೂ ಎಂ ಎಸ್ ಧೋನಿ ಆಂಗ್ಲ ಬೌಲರುಗಳನ್ನು ದಿಟ್ಟವಾಗಿ ಎದುರಿಸಿದರು. ಸುಸ್ಥಿರ ಬ್ಯಾಟಿಂಗ್ ನಡೆಸಿದ ಈ ಜೋಡಿ ಇಂಗ್ಲೆಂಡಿನ ಎಲ್ಲಾ ಬೌಲರುಗಳನ್ನು ಮನಬಂದಂತೆ ದಂಡಿಸಿ ನಾಲ್ಕನೇ ವಿಕೆಟಿಗೆ 256 ರನ್ ಸೇರಿಸಿ ತಂಡಕ್ಕೆ ಆಸರೆಯಾಯಿತು.

ರಂಜನೆಯ ಆಟವಾಡಿದ ಯುವಿ ಮತ್ತು ಧೋನಿ ಸುರಿಸಿದ ರನ್ ಮಳೆಯಿಂದ ತವರಿನ ಅಭಿಮಾನಿಗಳು ಮಿಂದೆದ್ದರು. ಮೊದಲು ಯುವರಾಜ್ ಸಿಂಗ್ ಶತಕ ಬಾರಿಸಿ ಸಂಭ್ರಮಿಸಿದರೆ, ನಂತರ ಧೋನಿ ಕೂಡ ಶತಕ ಸಿಡಿದರು. ಈ ಇಬ್ಬರು ಹಿರಿಯ ಆಟಗಾರರು ತೋರಿದ ಅದ್ಭುತ ಆಟ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಯಿತು. ಯುವರಾಜ್ ಸಿಂಗ್ 150 ರನ್ ಗಳಿಸಿದರೆ, ಧೋನಿ 134 ರನ್ ಹೊಡೆದರು.

382 ರನ್ನುಗಳ ಕಠಿಣ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಉತ್ತಮ ಆರಂಭವನ್ನೇ ನೀಡಿತು. ಆರಂಭಿಕ ದಾಂಡಿಗ ಜಾಸನ್ ರಾಯ್ ಹಾಗೂ ವನ್ ಡೌನ್ ದಾಂಡಿಗ ಜೋ ರೂಟ್ ಆಕರ್ಷಕ ಆಟವಾಡಿದರು. ರಾಯ್ 82 ರನ್, ರೂಟ್ 54 ರನ್ ಗಳಿಸಿದರು. ಇವರಿಬ್ಬರೂ ಔಟಾದ ಬಳಿಕ ನಾಯಕ ಇಯಾನ್ ಮೊರ್ಗನ್ ಭಾರತೀಯ ಬೌಲರುಗಳನ್ನು ನಿರ್ದಯವಾಗಿ ದಂಡಿಸಿದರು. ಮೊಹಿನ್ ಅಲಿಯೊಂದಿಗೆ ಹೋರಾಟ ನಡೆಸಿದ ಮೊರ್ಗನ್ ಆಕರ್ಷಕ ಶತಕ(102)ವನ್ನು ಬಾರಿಸಿದರು. ಮೊಹಿನ್ ಅಲಿ 55 ರನ್ ಗಳಿಸಿ ಅಂತಿಮ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ತಲುಪಿಸುವಲ್ಲಿ ವಿಫಲರಾದರು. ಅಂತಿಮವಾಗಿ ರೋಚಕ 15 ರನ್ ಗಳಿಂದ ಇಂಗ್ಲೆಂಡ್ ಸೋಲು ಒಪ್ಪಿಕೊಂಡಿತು.

ಇಂಗ್ಲೆಂಡ್ 50 ಓವರುಗಳಲ್ಲಿ 8 ವಿಕೆಟಿಗೆ 366 ರನ್ ಗಳಿಸಲು ಮಾತ್ರ ಶಕ್ತವಾಯಿತು. ಭಾರತದ ಪರ  ಆರ್ ಅಶ್ವಿನ್ 65 ರನ್ನಿಗೆ 3 ವಿಕೆಟ್ ಪಡೆದರು. ಈ ಗೆಲುವಿನ ಮೂಲಕ ಟೀಂ ಇಂಡಿಯಾ ಸತತವಾಗಿ ಆಂಗ್ಲರನ್ನು ಸೋಲಿಸಿದೆ.

ಯುವರಾಜ್ ಪಂದ್ಯಶ್ರೇಷ್ಠ

ಮೂರು ವರ್ಷಗಳ ನಂತರ ಮತ್ತೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡ ಯುವರಾಜ್ ಸಿಂಗ್ ಅವರ ಬ್ಯಾಟಿಂಗ್ ವೈಭವ ಕಾಣಲು ಕಾತುರದಿಂದ ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳು ಕಟಕಿನಲ್ಲಿ ಫುಲ್ ಖುಷಿ ಪಟ್ಟರು.

ಪುಣೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೇವಲ 15 ರನ್ ಗಳಿಸಿ ನಿರಾಸೆ ಮೂಡಿಸಿದ್ದ ಯುವರಾಜ್ ಕಟಕಿನಲ್ಲಿ ಅದ್ಭುತ ಶತಕ ಬಾರಿಸಿ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದರು.

ದೀರ್ಘಕಾಲದ ನಂತರ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸಿದ ಯುವರಾಜ್ ಸಿಂಗ್ ಈ ಪಂದ್ಯದಲ್ಲಿ ತನ್ನ 14 ನೇ ಶತಕ ದಾಖಲಿಸಿಕೊಂಡರು. 2011ರ ವಿಶ್ವಕಪ್ ನಂತರ ಯುವಿ ಬಾರಿಸಿದ ಮೊದಲ ಶತಕ ಇದು. 98 ಎಸೆತಗಳಲ್ಲಿ ಶತಕ ಹೊಡೆದ ಯುವಿ ಈ ಪಂದ್ಯದಲ್ಲಿ 150 ರನ್ ಗಳಿಸಿದರು. 21 ಆಕರ್ಷಕ ಬೌಂಡರಿ ಮತ್ತು 3 ಭರ್ಜರಿ ಸಿಕ್ಸರುಗಳು ಯುವಿ ಇನ್ನಿಂಗ್ಸಿನಲ್ಲಿ ದಾಖಲಾಗಿವೆ. ಅಮೋಘ ಆಟದ ಮೂಲಕ ತಂಡಕ್ಕೆ ಆಸರೆಯಾದ ಯುವರಾಜ್ ಸಿಂಗ್ ಪಂದ್ಯ ಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾದರು.