ಸರಣಿ `ಕ್ಲೀನ್ ಸ್ವೀಪ್’ ನಿರೀಕ್ಷೆಯಲ್ಲಿ ಕೊಹ್ಲಿ ಪಡೆ

ಭಾರತ -ಶ್ರೀಲಂಕಾ ಮೂರನೇ ಟೆಸ್ಟ್

  •   ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ

ಶ್ರೀಲಂಕಾ ವಿರುದ್ಧ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಭರ್ಜರಿ ಜಯಗಳಿಸಿರುವ ಟೀಂ ಇಂಡಿಯಾ, ಶನಿವಾರ ಕ್ಯಾಂಡಿಯಲ್ಲಿ ಆರಂಭಗೊಳ್ಳಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲೂ ಗೆಲುವಿನ ನಿರೀಕ್ಷೆಯಲ್ಲಿದೆ. ಈಗಾಗಲೇ ಸರಣಿಯನ್ನು ಕೈವಶ ಮಾಡಿಕೊಂಡಿರುವ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಸರಣಿಯನ್ನು `ಕ್ಲೀನ್ ಸ್ವೀಪ್’ ಮಾಡುವ ವಿಶ್ವಾಸದಲ್ಲಿದೆ.

ಕ್ಯಾಂಡಿ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಈ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆತಿಥೇಯ ಶ್ರೀಲಂಕಾ ತಂಡಕ್ಕೆ ಮತ್ತಷ್ಟುಸವಾಲೊಡ್ಡುವ ರಣತಂತ್ರವನ್ನು ರೂಪಿಸಿದೆ. ಎರಡು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾದ ಆಟಗಾರರು ಸರ್ವಾಂಗೀಣ ಪ್ರದರ್ಶನದ ಮೂಲಕ ಮಿಂಚಿದ್ದರು.

ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 304 ರನ್ನುಗಳಿಂದ ಭರ್ಜರಿ ಜಯಗಳಿಸಿತ್ತು. ನಂತರ ಕೊಲಂಬೊದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 53 ರನ್ನುಗಳಿಂದ ಟೀಂ ಇಂಡಿಯಾ ಜಯಗಳಿಸಿದೆ. ಪಲ್ಲೇಕೆಲೆ ಮೈದಾನ ವೇಗಿಗಳಿಗೆ ಪೂರಕವಾಗಲಿದ್ದು, ಹೀಗಾಗಿ ಸಸ್ಪೆಂಡ್ ಗೊಂಡಿರುವ ರವೀಂದ್ರ ಜಡೇಜ ಬದಲಿಗೆ ವೇಗಿ ಭುವನೇಶ್ವರ್ ಕುಮಾರರನ್ನು ಕಣಕ್ಕಿಳಿಸಲು ನಾಯಕ ಕೊಹ್ಲಿ ನಿರ್ಧರಿಸಿದ್ದಾರೆ.

ಟೀಂ ಇಂಡಿಯಾ ಆಟಗಾರರು ಬ್ಯಾಟಿಂಗಿನಲ್ಲಿ ಅದ್ಭುತವಾಗಿ ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಮಿಂಚಿದ್ದಾರೆ. ಶಿಖರ್ ಧವನ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ನಾಯಕ ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್ ಸರಣಿಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ನಡೆಸಿದ್ದಾರೆ. ಚೇತೇಶ್ವರ ಪೂಜಾರ ಅವರಂತೂ ಎರಡು ಟೆಸ್ಟ್ ಪಂದ್ಯಗಳಲ್ಲಿ ಎರಡು ಶತಕ ಬಾರಿಸಿ, ಇದೀಗ ಮೂರನೇ ಹ್ಯಾಟ್ರಿಕ್ ಶತಕ ಬಾರಿಸುವ ವಿಶ್ವಾಸದಲ್ಲಿದ್ದಾರೆ.

ಬೌಲಿಂಗ್ ವಿಷಯಕ್ಕೆ ಬಂದಾಗ ಸ್ಪಿನ್ ಜೋಡಿಗಳಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ಲಂಕಾ ದಾಂಡಿಗರ ಬೆವರಿಳಿಸಿದ್ದಾರೆ. ಅಂತೂ ಟೀಂ ಇಂಡಿಯಾದ ಬ್ಯಾಟ್ಸಮ್ಯಾನುಗಳು ಹಾಗೂ ಬೌಲರುಗಳ ಸಂಘಟಿತ ಪ್ರದರ್ಶನ ಶ್ರೀಲಂಕಾ ಆಟಗಾರರ ನಿದ್ದೆಗೆಡಿಸಿದೆ.