ಜಾಹೀರಾತಿನಲ್ಲೂ ಕೊಹ್ಲಿ ಮಾದರಿ

   ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ

ಆರೋಗ್ಯಕ್ಕೆ ಉತ್ತಮವಲ್ಲದ ಯಾವುದೇ ತಂಪು ಪಾನೀಯಗಳ ಜಾಹೀರಾತಿನಲ್ಲಿ ಭಾಗವಹಿಸುವುದಿಲ್ಲ ಎಂದು ಕೊಹ್ಲಿ ಖಡಾಖಂಡಿತವಾಗಿ ಹೇಳಿಕೊಂಡಿದ್ದಾರೆ.

ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಯಾವಾಗಲೂ ಇತರ ಆಟಗಾರರಿಗೆ ಮಾದರಿ ಯಾಗಲು ಪ್ರಯತ್ನಿಸುತ್ತಾರೆ. ಅವರ ಸ್ವಭಾವವೇ ಅಂತಹದು. ತನ್ನ ಕ್ರಿಕೆಟ್ ಬಾಳ್ವೆಯಲ್ಲಿ ಅವರು ಮಾದರಿಯಾಗುವಂತಹ ಸಂದೇಶದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಇದಕ್ಕೆ ಒಂದು ನಿದರ್ಶನ ಅವರು ಜಾಹೀರಾತುಗಳಲ್ಲಿ ಆಯ್ಕೆ ಮಾಡಿಕೊಳ್ಳುವ ಉತ್ಪನ್ನಗಳು.

ಇತ್ತೀಚೆಗೆ ಕೊಹ್ಲಿ ಅವರಿಗೆ ಜಾಹೀರಾತು ಕಂಪನಿಗಳಿಂದ ಆಫರುಗಳ ಮೇಲೆ ಆಫರ್ ಬರುತ್ತಿವೆ. ಆದರೆ, ಕೊಹ್ಲಿ ದೇಶಿಯವಲ್ಲದ ಹಾಗೂ ಆರೋಗ್ಯವರ್ಧಕವಲ್ಲದ ಉತ್ಪನ್ನಗಳಿಗೆ ಪ್ರಚಾರ ಮಾಡುವುದನ್ನು ನಿರಾಕರಿಸಿದ್ದಾರೆ. ಅವರಿಗೆ ಈಚೆಗೆ ತಂಪು ಪಾನೀಯಗಳ ಜಾಹೀರಾತಿನಲ್ಲಿ ಪಾಲ್ಗೊಳ್ಳುವಂತೆ ಆಫರ್ ಬಂದಿತ್ತು. ಆರೋಗ್ಯಕ್ಕೆ ಉತ್ತಮವಲ್ಲದ ಯಾವುದೇ ತಂಪು ಪಾನೀಯಗಳ ಜಾಹೀರಾತಿನಲ್ಲಿ ಭಾಗವಹಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಕೊಂಡಿದ್ದಾರೆ.

ಫಿಟ್ನೆಸ್ ಬಗ್ಗೆ ವಿಶೇಷ ಕಾಳಜಿಯನ್ನು ಕೊಹ್ಲಿ ಹೊಂದಿದ್ದಾರೆ. ಇದು ಅವರ ಜೀವನ ಶೈಲಿಯ ಭಾಗವಾಗಿದೆ. ಇದರಿಂದ ಹೊರತಾಗಿರುವುದರ ಭಾಗವಾಗಲು ಕೊಹ್ಲಿ ಸಿದ್ಧರಿಲ್ಲ. ಕೇವಲ ಹಣಕ್ಕಾಗಿ ಕೊಹ್ಲಿ ತಾನು ಬಳಸದ ವಸ್ತುಗಳನ್ನು ಅಥವಾ ಉತ್ಪನ್ನಗಳನ್ನು ಬಳಸಿಕೊಳ್ಳಿ ಎಂದು ಜನರಿಗೆ ಹೇಳಿದವರಲ್ಲ.

ಕೊಹ್ಲಿ ಈ ಹಿಂದೆ ಪೆಪ್ಪಿ ಕೂಲ್ ಡ್ರಿಂಕ್ಸ್ ಕಂಪನಿಯ ಜತೆ ಒಪ್ಪಂದ ಕಡಿದುಕೊಂಡಿದ್ದರು. ಕೊಹ್ಲಿ ಬಳಸದ ಉತ್ಪನ್ನಗಳು ಎಷ್ಟೇ ದೊಡ್ಡ ಸಂಸ್ಥೆಯಾಗಿದ್ದರೂ ಪ್ರಚಾರ ಜಾಹೀರಾತು ನೀಡೊಲ್ಲ ಎಂದಿದ್ದಾರೆ. ಈ ಮೂಲಕ ಕೊಹ್ಲಿ ಜಾಹೀರಾತಿನಲ್ಲೂ ಮಾದರಿಯಾಗುವಂತಹ ನಿರ್ಧಾರ ಕೈಗೊಂಡಿರು ವುದು ಆದರ್ಶವೆನಿಸಿದೆ.