ಜಯದ ಸನಿಹಕ್ಕೆ ಕೊಹ್ಲಿ ಬ್ರಿಗೇಡ್

ಭಾರತ -ಲಂಕಾ ತೃತೀಯ ಟೆಸ್ಟ್

  • ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ

ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಮತ್ತೊಂದು ಜಯದ ಹೊಸ್ತಿಲಲ್ಲಿದೆ. ಗೆಲುವಿಗೆ 410 ರನ್ ಗುರಿ ಪಡೆದ ಶ್ರೀಲಂಕಾ ದ್ವಿತೀಯ ಇನ್ನಿಂಗ್ಸಿನಲ್ಲಿ ಕಳಪೆ ಆರಂಭವನ್ನು ಕಂಡು ಸೋಲಿನ ಸುಳಿಯತ್ತ ಸಾಗಿದೆ.

ಮೂರನೇ ದಿನ 9 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿದ್ದ ಶ್ರೀಲಂಕಾ ತಂಡ ನಾಲ್ಕನೇ ದಿನ ಆಟ ಆರಂಭಿಸಿ ಕೇವಲ 17 ರನ್ ಗಳಿಸುವಷ್ಟರಲ್ಲೇ 376 ರನ್ನಿಗೆ ಆಲೌಟಾಯಿತು. ಶ್ರೀಲಂಕಾ ತಂಡದ ಪ್ರಥಮ ಇನ್ನಿಂಗ್ಸಿನಲ್ಲಿ ಕೊನೆಯವರಾಗಿ ಔಟಾದ ನಾಯಕ ದಿನೇಶ್ ಚಂಡಿಮಾಲ್ 164 ರನ್ ಗಳಿಸಿ ವೇಗಿ ಇಶಾಂತ್ ಶರ್ಮಗೆ ವಿಕೆಟ್ ಒಪ್ಪಿಸಿದರು. ಭಾರತದ ಪರ ಇಶಾಂತ್ ಶರ್ಮ ಹಾಗೂ ಆರ್ ಅಶ್ವಿನ್ ತಲಾ ಮೂರು ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜ ತಲಾ ಎರಡು ವಿಕೆಟ್ ಕಬಳಿಸಿದರು.

163 ರನ್ನುಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತೀಯ ಆಟಗಾರರು ಮತ್ತೊಮ್ಮೆ ಭರವಸೆಯ ಆಟವಾಡಿದರು. ಭಾರತ ಆರಂಭದಲ್ಲಿ ಮುರಳಿ ವಿಜಯ್ (9 ರನ್) ಮತ್ತು ಅಜಿಂಕ್ಯ ರಹಾನೆ (10 ರನ್) ಅವರ ವಿಕೆಟನ್ನು ಕಳೆದುಕೊಂಡರೂ ನಂತರ ಚೇತರಿಸಿಕೊಂಡು 5 ವಿಕೆಟಿಗೆ 246 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಭಾರತ ತಂಡದ ಮೂವರು ಆಟಗಾರರು ಶತಕಾರ್ಧ ಬಾರಿಸಿದ್ದು ದ್ವಿತೀಯ ಇನ್ನಿಂಗ್ಸ್ ವಿಶೇಷ. ಶಿಖರ್ ಧವನ್ (67 ರನ್), ವಿರಾಟ್ ಕೊಹ್ಲಿ (50 ರನ್) ಹಾಗೂ ರೋಹಿತ್ ಶರ್ಮ (50 ರನ್) ಅರ್ಧ ಶತಕ ದಾಖಲಿಸಿದರೆ, ಚೇತೇಶ್ವರ ಪೂಜಾರ 1 ರನ್ನಿನಿಂದ ಅರ್ಧ ಶತಕ ವಂಚಿತರಾದರು. ಶ್ರೀಲಂಕಾ ತಂಡದ ಐವರು ಬೌಲರುಗಳು ತಲಾ ಒಂದೊಂದು ವಿಕೆಟ್ ಪಡೆದರು.

ಗೆಲುವಿಗೆ 410 ರನ್ನುಗಳ ಟಾರ್ಗೆಟ್ ಪಡೆದುಕೊಂಡ ಶ್ರೀಲಂಕಾ ದ್ವಿತೀಯ ಇನ್ನಿಂಗ್ಸಿನಲ್ಲಿ ಭಾರತೀಯ ತಂಡದ ಬೌಲರುಗಳಿಗೆ ಆರಂಭದಲ್ಲೇ ಬೆದರಿತು. ಆರಂಭಿಕ ಆಟಗಾರರಾದ ದಿಮುತ್ ಕರುಣರತ್ನೆ ಹಾಗೂ ಸಮರವಿಕ್ರಮ ತಂಡವನ್ನು ಆದರಿಸುವಲ್ಲಿ ವಿಫಲರಾದರು. ನಂತರ ಆಡಲು ಬಂದ ಎಸ್ ಲಕ್ಮಲ್ ಸೊನ್ನೆ ಸುತ್ತಿಕೊಂಡರು. ಶ್ರೀಲಂಕಾ ತಂಡ 31 ರನ್ನಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಇನ್ನೂ ಏಳು ವಿಕೆಟ್ ಹೊಂದಿರುವ ಶ್ರೀಲಂಕಾ 379 ರನ್ನುಗಳ ಹಿನ್ನಡೆಯಲ್ಲಿದೆ. ಒನ್ ಡೌನ್ ಬ್ಯಾಟ್ಸಮನ್ ಧನಂಜಯ ಡಿಸಿಲ್ವ 13 ರನ್ ಗಳಿಸಿದ್ದು, ಇನ್ನೂ ಖಾತೆ ತೆರೆಯದ ಅಂಜೆಲೋ ಮ್ಯಾಥ್ಯೂಸ್ ಅವರೊಂದಿಗೆ ಕೊನೆಯ ದಿನ ಆಟ ಮುಂದುವರಿಸಲಿದ್ದಾರೆ. ಸ್ಪಿನ್ನರ್ ರವೀಂದ್ರ ಜಡೇಜ 5 ಓವರುಗಳಲ್ಲಿ 5 ರನ್ನಿಗೆ 2 ವಿಕೆಟ್ ಪಡೆದು ಬೌಲಿಂಗಿನಲ್ಲಿ ಮಿಂಚಿದರು.

LEAVE A REPLY