15 ಅನಾಥ ನಾಯಿಗಳ ದತ್ತು ಪಡೆದ ಕೊಹ್ಲಿ

ಬೆಂಗಳೂರು : ಟೀಮ್ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ತಂಡದ ಕಪ್ತಾನ ವಿರಾಟ್ ಕೊಹ್ಲಿ ಇತ್ತೀಚೆಗೆ ಜಕ್ಕೂರಿನಲ್ಲಿರುವ ಚಾರ್ಲೀಸ್   ಅನಿಮಲ್ ರೆಸ್ಕ್ಯೂ ಸೆಂಟರಿಗೆ ಭೇಟಿ ನೀಡಿ ಅಲ್ಲಿನ 15 ಶ್ವಾನಗಳನ್ನು ದತ್ತು ಪಡೆದುಕೊಂಡಿದ್ದಾರೆ. ಈ 15 ನಾಯಿಗಳಲ್ಲಿ ಕೆಲವು ದೃಷ್ಟಿಹೀನವಾಗಿದ್ದರೆ, ಇನ್ನು ಕೆಲವು ಅನಾರೋಗ್ಯಪೀಡಿತವಾಗಿವೆ ಹಾಗೂ ಅಂಗ ಊನ ಹೊಂದಿದ್ದು ಅವುಗಳನ್ನು ದತ್ತು ಪಡೆದು ಕೊಹ್ಲಿ ಮಾನವೀಯತೆ ಮೆರೆದಿದ್ದಾರೆ.

 

ಈ 15 ಶ್ವಾನಗಳ ಲಾಲನೆ-ಪಾಲನೆ ಆರೈಕೆಗಾಗಿ ತಗಲುವ ಎಲ್ಲಾ ವೆಚ್ಚಗಳನ್ನೂ ಕೊಹ್ಲಿ ಭರಿಸಲಿದ್ದಾರಲ್ಲದೆ ಅವುಗಳ ಆರೋಗ್ಯದ  ಬಗ್ಗೆಯೂ ಅವರಿಗೆ  ಆಗಾಗ ಮಾಹಿತಿ ನೀಡಲಾಗುವುದು.

“ಸಾಮಾನ್ಯವಾಗಿ ಜನರು ಮುದ್ದಾಗಿರುವ ನಾಯಿಗಳನ್ನು ದತ್ತು ಪಡೆಯ ಬಯಸಿದರೆ, ವಿರಾಟ್ ಅವರು ದುರ್ಬಲವಾಗಿರುವ ಹಾಗೂ ಆರೋಗ್ಯ ಸಮಸ್ಯೆಯಿರುವ ನಾಯಿಗಳನ್ನು ದತ್ತು ಪಡೆದುಕೊಂಡಿದ್ದಾರೆ” ಎಂದು ಸಂಸ್ಥೆಯ ಕಾರ್ಯಕರ್ತೆ ಐಶ್ವರ್ಯ ಶ್ರೀಧರ್ ಹೇಳಿದ್ದಾರೆ. ಸಂಸ್ಥೆಯ ಅತ್ಯಂತ ಕಿರಿಯ ಕಾರ್ಯಕರ್ತರಾದ ಸಿಮೋನ್ ವೈದ್ಯ ಹಾಗೂ ಅನ್ಮೋಲ್ ಅವರ ಮುತುವರ್ಜಿಯಿಂದಾಗಿ ವಿರಾಟ್ ಇಲ್ಲಿಗೆ ಭೇಟಿ ನೀಡಿದ್ದರು.